
ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಬಲಿ ಬೇಡ – ಪ್ರಭು ಬಿ.ಚವ್ಹಾಣ್
ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಬಲಿ ಬೇಡ ಎಂದು ಸಚಿವ ಪ್ರಭು ಬಿ.ಚವ್ಹಾಣ್ ಮನವಿ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ರಾಜ್ಯದಿಂದ ಹೊರಗಡೆ ಅಥವಾ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಅಕ್ರಮ ಗೋವುಗಳು ಮತ್ತು ಗೋಮಾಂಸ ಸಾಗಿಸುವುದರ ಮೇಲೆ ಪಶುಸಂಗೋಪನೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು, ಗೋಹತ್ಯೆ ತಡೆಗಟ್ಟುವಲ್ಲಿ ಸಕ್ರೀಯರಾಗಿರುವಂತೆ ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ ನೀಡಿದ್ದಾರೆ. ಸಾಮಾನ್ಯವಾಗಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಲಿ ಕೊಡುವ ಸಂಪ್ರದಾಯವಿದ್ದು, ಇದಕ್ಕಾಗಿ ಜಾನುವಾರುಗಳಾದ ಗೋವು, ಹಸು, ಎತ್ತು, ಕರು, ಒಂಟೆಗಳ ಸಹ ಬಳಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಗೋಹತ್ಯೆ ನಿಷೇಧ ಅನುಷ್ಠಾನ ಆಗಿರುವುದರಿಂದ ಗೋವುಗಳ ಹತ್ಯೆ ಯಾವುದೇ ಕಾರಣಕ್ಕೂ ನಡೆಯದಂತೆ ಜಾಗೃತೆ ವಹಿಸಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.