BBMPಯ ಎಲ್ಲಾ ವಾರ್ಡ್ ಗಳಲ್ಲೂ ಆಮ್ ಆದ್ಮಿಗಳ ಸ್ಪರ್ಧೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು

ಬೆಂಗಳೂರು : ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳಲ್ಲೂ ಆಮ್‌ ಆದ್ಮಿಗಳು ಸ್ಪರ್ಧಿಸಲಿದ್ದು, ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು. ಇಂದು ಬೆಂಗಳೂರಿನ ಪ್ರೆಸ್‌ಕ್ಲಬ್‌ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಬಿಎಂಪಿಯ ಈ ಚುನಾವಣೆಯು ಜನಸಾಮಾನ್ಯ ಮತ್ತು ಶೇಡಕಾ 40 ಲಂಚಪಡೆಯುವ ಸರ್ಕಾರದ ನಡುವಿನ ಕದನವಾಗಲಿದೆ. “ಇಡೀ ದೇಶ ಸ್ವಾತಂತ್ರ್ಯ ದಿನದ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ. ದುರದೃಷ್ಟವಶಾತ್ ಪ್ರಜಾಪ್ರಭುತ್ವ ಎಂಬುದು “ಆಯ್ದ ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ” ಮಾತ್ರ ಇರುವಂತೆ ಭಾಸವಾಗುತ್ತಿದೆ” ಎಂದು ಹೇಳಿದರು.

*ದೆಹಲಿ ರಾಜ್ಯದ ಪ್ರಾಮಾಣಿಕ ಆಡಳಿತವು ಇಡೀ ದೇಶಕ್ಕೇ ಮಾದರಿಯಾಗಿದೆ, ಪಂಜಾಬ್‌ನಲ್ಲೂ ಕೂಡಾ ಭ್ರಷ್ಟಾಚಾರ ರಹಿತ ಸರ್ಕಾರ ಸೃಷ್ಟಿಯಾಗಿದೆ. ಇದು ಬೆಂಗಳೂರಿನಲ್ಲಿ ಯಾಕೆ ಆಗಬಾರದು? ಬೆಂಗಳೂರಿನಲ್ಲೂ ಇದು ಸಾಧ್ಯ. ಇದಕ್ಕಾಗಿ ನಾವು ಈ 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು. ಒಂದು ಕೋಟಿ ಜನರು ಇರುವ ಈ ನಗರವನ್ನು ಕೆಲವೇ ಕೆಲವು ದುಷ್ಟರ, ಭ್ರಷ್ಟರ ಕೈಗಳಿಗೆ ನೀಡಿ ಸುಮ್ಮನೆ ಕುಳಿತಿದ್ದೇವೆ. ಅವರು ನಮ್ಮ ಭವಿಷ್ಯದ ಮೇಲೆ ಪ್ರಹಾರ ಮಾಡುತ್ತಿದ್ದಾರೆ ಎಂದು ಪೃಥ್ವಿ ರೆಡ್ಡಿ ಹೇಳಿದರು.

ನಮ್ಮ ನಗರವನ್ನು, ನಮ್ಮ ಜನರನ್ನು ರಕ್ಷಿಸಲು ಬೆಂಗಳೂರನ್ನು ಪ್ರೀತಿಸುವ ಜನರನ್ನು ನಾವು ಸ್ವಾಗತಿಸುತ್ತೇವೆ. ಇಲ್ಲಿನ ಕೆರೆಗಳಿಗಾಗಿ ಹೋರಾಡುವವರು, ನಗರದ ಮರಗಳನ್ನು ರಕ್ಷಿಸುತ್ತಾ ಬಂದವರು, ಮಕ್ಕಳಿಗಾಗಿ ಶಾಲೆ, ಬಡವರಿಗಾಗಿ ಸರ್ಕಾರಿ ಆಸ್ಪತ್ರೆ, ಗುಂಡಿ ಮುಕ್ತ ರಸ್ತೆಗಳನ್ನು ಕೇಳುತ್ತಾ ಬಂದಿರುವ ಸಾಮಾಜಿಕ ಹೋರಾಟಗಾರರು ಇರಬಹುದು, ಇತರ ಪಕ್ಷಗಳ ಸಮರ್ಥ ನಾಯಕರಾಗಿ ಕಡೆಗಣಿಸಲ್ಪಟ್ಟವರು – ಹೀಗೆ ಎಲ್ಲರನ್ನೂ ಸ್ವಾಗತಿಸುತ್ತೇವೆ. ಜನರು ಬೆಂಗಳೂರಿಗಾಗಿ ಮುಂದ ಬರಬೇಕು. ಅವರ ಒಂದು ಹೆಜ್ಜೆಯಿಂದ ನಮ್ಮ ಶಕ್ತಿ ಇನ್ನಷ್ಟು ಹಿಗ್ಗಲಿದೆ. ಬೆಂಗಳೂರನ್ನು ಸೇರಿ ಕಾಪಾಡಲು ಸಾಧ್ಯವಿದೆ” ಎಂದು ಪೃಥ್ವಿ ರೆಡ್ಡಿ ಕರೆ ನೀಡಿದರು.

“ಕೇಜ್ರೀವಾಲ್‌ಗೆ ಒಂದು ಅವಕಾಶ” ಎಂಬ ಘೋಷವಾಕ್ಯದ ಅಡಿಯಲ್ಲಿ, ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ನೇತೃತ್ವದಲ್ಲಿ ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಸುರೇಶ್ ರಾಥೋಡ್, ಕುಶಲಸ್ವಾಮಿ, ಫರಿದುದ್ದೀನ್ ಷರೀಫ್‌, ಸಂಚಿತ್ ಸಹಾನಿಯವರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.. ಇದರ ಮೂಲಕ ನಗರದ ಸಾಮಾನ್ಯ ಪ್ರಜೆಗಳು, ಯುವಜನರು, ಮಹಿಳೆಯರು, ವಕೀಲರು ಮತ್ತು ಸಮಾಜದ ಎಲ್ಲಾ ಸ್ತರದ ಜನರನ್ನು ಚುನಾವಣೆಯಲ್ಲಿ ಭಾಗವಹಿಸಲು ಅಹ್ವಾನಿಸುತ್ತಿದ್ದೇವೆ’ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ “ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಇರುವವರು ಅಭ್ಯರ್ಥಿ ಶೋಧನಾ ಸಮಿತಿಯನ್ನು ಸಂಪರ್ಕಿಸಬಹುದು. 7669100500 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ಅಥವಾ AapAspirant@karnataka.aanaadmiparty.Org ವಿಳಾಸಕ್ಕೆ ಇಮೇಲ್ ಕಳುಹಿಸುವ ಮೂಲಕ ಸಂಪರ್ಕ ಮಾಡಬಹುದು. ಶೇಷಾದ್ರಿಪುರಂನ ಕುಮಾರಪಾರ್ಕ್ ವೆಸ್ಟ್ ನಂಬರ್ 54ರಲ್ಲಿರುವ ನಮ್ಮ ನೂತನ ಕಚೇರಿಯಲ್ಲಿ ಕೂಡ ಇಂಗಿತ ವ್ಯಕ್ತಪಡಿಸಲು ಅವಕಾಶವಿದೆ’ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡರಾದ ಬಿ.ಟಿ.ನಾಗಣ್ಣ, ಸಂಚಿತ್ ಸಹಾನಿ, ಸುರೇಶ್ ರಾಥೋಡ್, ಕುಶಲ ಸ್ವಾಮಿ, ಫರೀದುದ್ದಿನ್ ಶರೀಫ್‌ ಮತ್ತಿತರ ಮುಖಂಡರು ಭಾಗವಹಿಸಿದ್ದರು.

 

Leave a Reply

Your email address will not be published.