ಬಳ್ಳಾರಿ ಕರ್ನಾಟಕದಲ್ಲೇ ಇರಬೇಕಾದರೆ ನಾಡೋಜ.ಡಾ.ಕೋ. ಚೆನ್ನಬಸಪ್ಪನವರು ಕಾರಣ: ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು

ಬೆಂಗಳೂರು: ನೇರ ನುಡಿ, ನುಡಿದಂತೆ ನಡೆಯುತ್ತ ಅನ್ಯಾಯವನ್ನು ಯಾವ ಭಯವಿಲ್ಲದೆ ಧಾಡ್ಯವಾಗಿ ವಿರೋಧಿಸುವ   ಮೇರು ವ್ಯಕ್ತಿತ್ವ ನಾಡೋಜ ಡಾ. ಕೋ.ಚೆನ್ನಬಸಪ್ಪನವರ ಹೋರಾಟ ಇಲ್ಲದಿದ್ದರೆ ಬಳ್ಳಾರಿಯ ನೆಲ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಬಳ್ಳಾರಿ ಆಂದ್ರದ ಪಾಲಾಗುತ್ತಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು, ಕೋಚೆ ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್ (ನೋಂ), ಕರ್ನಾಟಕ ಗಾಂಧಿ ಸ್ಮಾರಕ ನಿಧಿ (ನೋಂ) ಹಾಗೂ ಭಾರತೀಯ ವಿದ್ಯಾಭವನ ಇವರುಗಳ ಸಹಭಾಗಿತ್ವದಲ್ಲಿ ಗಾಂಧಿ ಭವನದಲ್ಲಿರುವ ಮಹದೇವ ದೇಸಾಯಿ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಸಾಹಿತಿ ನಾಡೋಜ ಡಾ. ಕೋ. ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಚೆ ಅವರು ಅನೇಕ ವಿಶೇಷತೆಗಳ ಸಂಗಮ, ಅವರು ಕರ್ನಾಟಕ ಏಕಿಕರಣದ ರೂವಾರಿ, ಕನ್ನಡದ ಕಟ್ಟಾಳು ಸಾಮಾಜಿಕ ಚಿಂತಕರು ಆದ ಅವರು  ೮೦ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದಾದಾರೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರ, ನೊಂದವರ, ರೈತರ ಪರ ಧ್ವನಿಯಾಗಿದ್ದವರು, ಸಾಮಾಜಿಕ ಸಮಸ್ಯೆಗಳ ವಕೀಲರಾಗಿದ್ದರು ಎಂದು ಬಹುಮುಖ ಪ್ರತಿಭೆಯ ಕೋ.ಚೆನ್ನಬಸಪ್ಪ ಅವರ ನಿಲುವುಗಳನ್ನು ನಾಡೋಜ ಡಾ. ಮಹೇಶ ಜೋಶಿ ನೆನಪಿಸಿಕೊಂಡರು.

ಕೋಚೆ ಅವರ ಜನ್ಮಶತಾಬ್ದಿ ಸಮಾಮಾರಂಭವನ್ನು ಉದ್ಘಾಟಿಸಿದ ಭಾರತದ ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶಿವರಾಜ ವಿ. ಪಾಟೀಲ್  ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ರಚನಾತ್ಮಕ ಕೆಲಸ‌ಗಳನ್ನು ಮಾಡುತ್ತಿದೆ. ಅದಕ್ಕೆ ಸಾಕ್ಷಿ ಇವತ್ತಿನ ಕೋಚೆ ಅವರ ಜನ್ಮಶತಾಬ್ದಿ ಕಾರ್ಯಕ್ರಮವೂ ಒಂದು. ಕೋಚೆ ಅವರು ಪ್ರಜ್ಞಾವಂತಿಕೆಯ ನ್ಯಾಯಯುತ ವ್ಯಕ್ತಿತ್ವದ ವಿದ್ವಾಂಸ.  ಸಾಹಿತ್ಯಕ್ಷೇತ್ರದ ಆಸ್ತಿ, ಯಾರದೇ ಹಂಗಿಲ್ಲದೆ, ಹಮ್ಮಿಲ್ಲದೆ ಕನ್ನಡಕ್ಕಾಗಿ ಬದುಕಿದವರು  ಎಂದು ಕೋಚೆ‌ ಅವರ  ಬಗ್ಗೆ‌ ನೆನಪಿಸಿಕೊಂಡರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಮಾತನಾಡಿ ಗಾಂಧಿಯವರ ನಡೆ ನುಡಿ ವಿಚಾರಗಳನ್ನು ಯಾರು ಒಪ್ಪಿಕೊಳ್ಳುತ್ತಾರೋ, ಅನ್ಯಾಯ ವಿರೋಧಿಸ್ತಾರೋ ಅವರೆ ಗಾಂಧಿವಾದಿಗಳು. ಖಾದಿ ತೊಟ್ಟ ಮಾತ್ರಕ್ಕೆ ಗಾಂಧಿವಾದಿ ಆಗಲಾರರು. ಕೋಚೆ ಅವರು ಅನ್ಯಾಯವನ್ನು  ತಕ್ಷಣವೇ ವಿರೋಧಿಸುವ ಮಹಾನ್ ಗಾಂಧಿ ವಾದಿಗಳಾಗಿದ್ದರು ಎಂದರು.

ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಶಿವಯೋಗಿ ಕಳಸದ ಮಾತನಾಡಿ ಕೋ. ಚೆನ್ನಬಸಪ್ಪರವರ ಸರಳ ಜೀವನ ಮತ್ತು ಸಾಮಾನ್ಯ ಬದುಕಿನ ಅನಾವರಣ ಮಾಡಿದರು. ಕೋಚೆ ಅವರ ಮಗ ಹಾಗೂ ಮೇರಿಲ್ಯಾಂಡ್ ಯೂನಿವರ್ಸಿಟಿಯ ಡೀನ್ ಆದ ಡಾ. ಪ್ರಭುದೇವ ಕೋಣನ ಮಾತನಾಡಿ ತಾನು ಕೋಚೆಯವ ಮಗ ಎನ್ನುವುದಕ್ಕೆ ಅಭಿಮಾನವಾಗುತ್ತದೆ. ಕೆಲವು ವಿಷಯಗಳಲ್ಲಿ ಯಾವತ್ತು ರಾಜಿ ಮಾಡಿಕೊಳ್ಳದ ಅವರು ವಾದಕ್ಕೆ ನಿಂತ ಉದಾಹರಣೆಗಳನ್ನು ನೆನಪಿಸಿಕೊಂಡರು.

ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಡಾ. ಬಸವರಾಜ ಸಾದರ ಕೋಚೆ ಮತ್ತು ಪ್ರಗತಿಶೀಲ ಸಾಹಿತ್ಯ ಚಳವಳಿ ಕುರಿತು ಹಾಗೂ ಹಿರಿಯ ಸಾಹಿತಿಗಳಾದ ಪ್ರೊ. ಕೆ.ಎಸ್. ಮಧುಸೂಧನ ಅವರು ಕೋಚೆ ಅವರ ಅರವಿಂದ ಸಾಹಿತ್ಯ ಅನುವಾದಗಳು ವಿಷಯದ ಕುರಿತು ಉಪನ್ಯಾಸ  ಮಾಡಿದರು. ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಶ್ರೀ ಲಕ್ಷ್ಮಣ ಕೊಡಸೆ ವಹಿಸಿಕೊಂಡಿದ್ದರು.

ನಾನು ಕಂಡಂತೆ ಕೋಚೆ ಕುರಿತು ಹಿರಿಯ ಸಂಶೋಧಕರಾದ ಡಾ. ವೀರಶೆಟ್ಟಿ ಬಿ. ಗಾರಂಪಳ್ಳಿ, ಸಾಹಿತಿಗಳಾದ ಶ್ರೀ ಪ್ರಕಾಶ ಗಿರಿಮಲ್ಲನವರ, ಕೋಚೆ ಅವರ ಮಗಳಾದ ಶ್ರೀಮತಿ ಶಾಂತ ಜಯಪ್ರಸಾದ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಕೆ.ಸಿ. ಗುರುದೇವ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಕೆ.ಬಿ. ಗುದಗಿ ಅವರುಗಳು ಕೋಚೆಯವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಶ್ರೀ ನೇ.ಭ.ರಾಮಲಿಂಗಶೆಟ್ಟಿ ಸ್ವಾಗತಿಸಿದರು, ಕನ್ನಡ ಸಾಹಿತ್ಯ ಪರಿಷತ್ತಿನ  ಗೌರವಕೋಶಾಧ್ಯಕ್ಷ  ಶ್ರೀ ಬಿ.ಎಂ.ಪಟೇಲ್‌ಪಾಂಡು ಅವರು ಕಾರ್ಯಕ್ರಮ ನಿರೂಪಿಸಿದರು.

ಛಾಯಾಚಿತ್ರ –  ೧ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಸಾಹಿತಿ ನಾಡೋಜ ಡಾ. ಕೋ. ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭದಲ್ಲಿ ಗಣ್ಯರಿಂದ ಪುಷ್ಪನಮನ.

ಛಾಯಾಚಿತ್ರ-೨ ಗಣ್ಯರಿಂದ ಸಸಿಗಳಿಗೆ ನೀರು ಹಾಕುವುದರ ಮೂಲಕ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಸಾಹಿತಿ ನಾಡೋಜ ಡಾ. ಕೋ. ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭ ಚಾಲನೆ

ಛಾಯಾಚಿತ್ರ ೩- ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಸಾಹಿತಿ ನಾಡೋಜ ಡಾ. ಕೋ. ಚೆನ್ನಬಸಪ್ಪ ಅವರ ಜನ್ಮಶತಾಬ್ದಿ ಸಮಾರಂಭದಲ್ಲಿ ಗಣ್ಯರಿಂದ ಕನ್ನಡ ಬಾವುಟ ಅನಾವರಣ.

Leave a Reply

Your email address will not be published.