ಬೈಕ್ ಹಾಗೂ ಆಟೋಗೆ ಡಿಕ್ಕಿ ಹೊಡೆದ ಕಾರು: ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವು

ರಾಷ್ಟ್ರೀಯ

ಅಹಮದಾಬಾದ್: ಅತಿ ವೇಗವಾಗಿ ಬಂದ ಕಾರು ಆಟೋ ರಿಕ್ಷಾ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಟ್ಟು ಆರು ಮಂದಿ ಮೃತಪಟ್ಟಿರುವ ಧಾರುಣ ಘಟನೆ ಗುಜರಾತ್ ನ ಆನಂದ್ ಜಿಲ್ಲೆಯ ಸೋಜಿತ್ರಾ ಗ್ರಾಮದ ಆನಂದ ಪಟ್ಟಣ ಮತ್ತು ತಾರಾಪುರದ ರಾಜ್ಯ ಹೆದ್ದಾರಿಯಲ್ಲಿ  ನಡೆದಿದೆ.

ಅಪಘಾತದಲ್ಲಿ ವಿನಾ ವಿಪುಲ್ ಮಿಸ್ತ್ರಿ (44) ಜಿಯಾ (14) ಮತ್ತು ಜಾನ್ವಿ (17) ಯಾಸಿನ್ ಮೊಹಮ್ಮದ್ ವೋಹ್ರಾ (38) ಯೋಗೇಶ್ ರಾಜೇಶ್ ಓಡ್ (20) ಮತ್ತು ಸಂದೀಪ್ ಠಾಕೂರ್ ಓಡ್ (19) ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಕುಟುಂಬದ ಸದಸ್ಯರು ರಕ್ಷಾಬಂಧನವನ್ನು ಆಚರಿಸಿ ಹಿಂತಿರುಗುತ್ತಿದ್ದಾಗ ಆನಂದ್ ಜಿಲ್ಲೆಯ ಸೋಜಿತ್ರಾ ಬಳಿ ಈ ಅಪಘಾತ ಸಂಭವಿಸಿದೆ. ಎಸ್‌ಯುವಿ ಕಾರು ಚಾಲನೆ ಮಾಡುತ್ತಿದ್ದ ಕೇತನ್ ರಮಣ್‌ಭಾಯ್ ಪಾಧಿಯಾರ್ ಅತಿ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಕೇತನ್ ರಮಣ್‌ಭಾಯ್ ಪಾಧಿಯಾರ್ ವಿರುದ್ಧ 304 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆನಂದ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗುಪ್ತಾ ಮಾತನಾಡಿ, ಆನಂದ್‌ನಲ್ಲಿ ರಾತ್ರಿ 7 ಗಂಟೆಗೆ ಕಾರು, ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಆಟೋದಲ್ಲಿದ್ದ ನಾಲ್ವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

Leave a Reply

Your email address will not be published.