ಮುಂಬೈ; ಬಾಲಿವುಡ್ ಕಾ ಶೆಹನ್ ಷಾ ಅಮಿತಾಭ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಶನಿವಾರ ಬೆಳಿಗ್ಗೆ ಬಚ್ಚನ್ ಕುಟುಂಬ ರ್ಯಾಪಿಡ್ ಟೆಸ್ಟ್ ಗೆ ಒಳಪಟ್ಟಿತ್ತು. ಈ ಟೆಸ್ಟ್ ನಲ್ಲಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ವಿಷಯವನ್ನರಿತ ತಕ್ಷಣವೇ ತಮ್ಮ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಿದ ಬಿಗ್ ಬಿ, ‘ನನಗೆ ಕೊರೊನಾ ಪಾಸಿಟಿವ್ ಬಂದಿದೆ.
10 ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರಿಗೂ ಕೋವಿಡ್ ಟೆಸ್ಟ್ ಗೆ ಒಳಗಾಗಲು ಸೂಚಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಇಡೀ ಬಚ್ಚನ್ ಕುಟುಂಬಕ್ಕೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅಮಿತಾಭ್ ಪತ್ನಿ ಜಯಾ ಬಚ್ಚನ್ ಹಾಗೂ ಸೊಸೆ ಐಶ್ಚರ್ಯ ರೈ ಬಚ್ಚನ್ಗೆ ಕೊರೊನಾ ನೆಗೆಟಿವ್ ಬಂದಿರೋದು ಸದ್ಯಕ್ಕೆ ಬಚ್ಚನ್ ಕುಟುಂಬದ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ.
ಲಾಕ್ಡೌನ್ ಹಿನ್ನಲೆಯಲ್ಲಿ ಮುಂಬೈನ ಜುಹುವಿನ ತಮ್ಮ ನಿವಾಸದಲ್ಲೇ ಉಳಿದುಕೊಂಡಿದ್ದ ಅಮಿತಾಭ್, ಹೊರಗೇ ಎಲ್ಲೂ ಹೋಗಿರಲಿಲ್ಲ. ಆದರೆ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದ ಪ್ರೊಮೊ ಚಿತ್ರೀಕರಣವನ್ನ ತಮ್ಮ ಮನೆಯಲ್ಲೇ ಮಾಡಿದ್ರು. ಆಗ ಹಲವು ಚಿತ್ರತಂತ್ರಜ್ಞರು ಅಮಿತಾಭ್ರನ್ನ ಭೇಟಿ ಮಾಡಿದ್ದರು ಎಂಬ ಮಾಹಿತಿಯನ್ನ ಬಚ್ಚನ್ ಕುಟುಂಬ ಹಂಚಿಕೊಂಡಿದೆ.
ಸದ್ಯಕ್ಕೆ ಅಮಿತಾಭ್ ಹಾಗೂ ಅಭಿಷೇಕ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರ ಆರೋಗ್ಯಸ್ಥಿತಿ ನಿಯಂತ್ರಣದಲ್ಲಿದೆ. ಮಹಾರಾಷ್ಟ್ರದ ಆರೋಗ್ಯಮಂತ್ರಿ ರಾಜೇಶ್ ಟೋಪೆ ಕೂಡ ಬಚ್ಚನ್ ಕುಟುಂಬದಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಅಮಿತಾಭ್ ಹಾಗೂ ಅಭಿಷೇಕ್ ಚೇತರಿಕೆಗೆ ಈಗ ಇಡೀ ಭಾರತೀಯ ಚಿತ್ರರಂಗ ಪ್ರಾರ್ಥನೆ ಮಾಡುತ್ತಿದೆ.