
ಕಂಚಿನ ಪದಕ ಗೆದ್ದ ಕನ್ನಡಿಗ ಗುರುರಾಜ್ ಪೂಜಾರಿ: ಅಭಿನಂದನೆ ಸಲ್ಲಿಸಿದ CM ಬೊಮ್ಮಾಯಿ
ಬೆಂಗಳೂರು: 61 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಪಿ ಗುರುರಾಜ್ ಪೂಜಾರಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವ ಸಿಎಂ, ನಮ್ಮ ಹುಡುಗ ಗುರುರಾಜ್ ವೇಡ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವುದು ಸಂತೋಷವಾಗಿದೆ. ಇಡೀ ದೇಶ ಈ ಗೆಲುವನ್ನು ಸಂಭ್ರಮಿಸುತ್ತಿದೆ.
ತಮ್ಮ ಪರಿಶ್ರಮ ಹಾಗೂ ಅಚಲ ನಿರ್ಧಾರದಿಂದ ಈ ಗೆಲುವು ಸಾಧಿಸಿರುವ ಗುರುರಾಜ್ಗೆ ಅಭಿನಂದನೆಗಳು. ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿ ಎಂದು ಹಾರೈಸಿದರು. ಕಾಮನ್ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕರ್ನಾಟಕ ಮೂಲದ ಕ್ರೀಡಾಪಟು ಕಂಚಿನ ಪದಕ ಗೆದ್ದಿದ್ದು, ಭಾರತಕ್ಕೆ 2ನೇ ಪದಕ ಲಭಿಸಿದೆ. ಕರ್ನಾಟಕದ ಗುರುರಾಜ್ ಪೂಜಾರಿ ವೇಟ್ಲಿಫ್ಟಿಂಗ್ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಗುರುರಾಜ್ ಒಟ್ಟು 269 ಕೆಜಿ ತೂಕ ಎತ್ತುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.