Home Crime BSY ಕುರ್ಚಿ ಕಳೆದುಕೊಳ್ಳೋಕ್ಕೂ ಇತ್ತು ಗುಲ್ಬರ್ಗಾದ ಕೊಲೆಯ ನಂಟು..!? ಮೈತ್ರಿ ಸರ್ಕಾರದ ಬರದೇ ಬಿಜೆಪಿ ಸರ್ಕಾರ...

BSY ಕುರ್ಚಿ ಕಳೆದುಕೊಳ್ಳೋಕ್ಕೂ ಇತ್ತು ಗುಲ್ಬರ್ಗಾದ ಕೊಲೆಯ ನಂಟು..!? ಮೈತ್ರಿ ಸರ್ಕಾರದ ಬರದೇ ಬಿಜೆಪಿ ಸರ್ಕಾರ ಇದ್ದಿದ್ರೆ ಕೊಲೆನೇ ನಡಿತ್ತಿರ್ಲಿಲ್ವಂತೆ..!?

731
0
SHARE

ಅವೊತ್ತು ಇದೇ ತಿಂಗಳ ಅಂದ್ರೆ ಸೆಪ್ಟಂಬರ್ 3 ನೇ ತಾರೀಖು. ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ, ಕೂಗಾಟ, ರಂಪಾಟ, ಧಿಕ್ಕಾರ.. ಟೋಟಲೀ ಹೈಡ್ರಾಮವೇ ನಡೆದಿತ್ತು.ಹೌದು.. ಕಲಬುರಗಿ ಡಿಸಿ ಆಫೀಸ್ ಎದುರು ಅವೊತ್ತು ಇಂತಾ ಸೀನ್ ಕ್ರಿಯೇಟ್ ಆಗಿತ್ತು. ಒಂದು ಕಡೆ ದಲಿತ ವಿರೋಧಿ ಜಿಲ್ಲಾಧಿಕಾರಿಗೆ ಧಿಕ್ಕಾರ ಅನ್ನೋ ಕೂಗು, ಮತ್ತೊಂದು ಕಡೆ ಬೇಕೆ ಬೇಕು ನ್ಯಾಯ ಬೇಕು ಅನ್ನೋ ಆಗ್ರಹ.. ಪರಿಸ್ಥಿತಿ ಕೈಮೀರಬಾರದು ಅಂತ ಅಲ್ಲೇ ಮೊಕ್ಕಾಂ ಹೂಡಿದ್ದ ಪೊಲೀಸರು. ಅಷ್ಟಕ್ಕೂ ಕಲಬುರಗಿ ನಗರದಲ್ಲಿ ಯಾಕಿಂತಾ ಅನ್ನಿವೇಶ, ಮಟಮಟ ಮಧ್ಯಾಹ್ನ ಧಗಧಗ ಉರಿಯೋ ಬಿಸಿಲಲ್ಲಿ ಉಂಟಾಗಿದ್ದ ಈ ಪರಿಸ್ಥಿತಿಗೆ ಕಾರಣ ಏನೂ..

ಇಷ್ಟಕ್ಕೆಲ್ಲಾ ಕಾರಣ ಏನೂ ಅಂತ ನೋಡಿದಾಗ ಕಂಡಿದ್ದು ಈ ವ್ಯಕ್ತಿ.ದೈತ್ಯಾಕಾರಿ, ಆಜಾನುಬಾಹು ಹಾಗೆ ಕಾಣೋ ಈತನ ಹೆಸರು ರಾಹುಲ್ ಬೀಳಗಿ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಭೂಸನೂರು ಗ್ರಾಮದ ನಿವಾಸಿ. ಭೂಸನೂರು ಗ್ರಾಮದಲ್ಲಿ ದಲಿತ ಮುಖಂಡನೂ ಹೌದು. ಅಷ್ಟೇ ಅಲ್ಲ ಆಳಂದಲ್ಲಿ ಎ ಓನ್ ಕಾಂಟ್ರ್ಯಾಕ್ಟರ್. ಎಲ್ಲದಕ್ಕಿಂತ ಮೇಲಾಗಿ ಆಳಂದ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪರಮಾಪ್ತ. ಒಂದು ರೀತಿ ಎಂಎಲ್ಎ ಸಾಹೇಬರ ರೈಟ್ ಹ್ಯಾಂಡ್. ಅಷ್ಟು ಮಾತ್ರವೇ ಅಲ್ಲ ಆಳಂತ ತಾಲೂಕು ಬಿಜೆಪಿ ದಲಿತ ಮೋರ್ಚದ ಅಧ್ಯಕ್ಷನೂ..

ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕೋ ಈ ಪ್ರತಿಭಟನೆಗೂ, ಇಲ್ಲಿ ಸೃಷ್ಠಿಯಾಗಿರೋ ಸೆಚ್ಯುಯೇಷನ್ ಗೂ ಈ ದಲಿತ ಮುಖಂಡ ಹಾಗೂ ಶಾಸಕ ಸುಭಾಷ್ ಗುತ್ತೇದಾರ್ ಅವರ ಪರಮಾಪ್ತನಿಗೂ ಏನ್ ಸಂಬಂಧ, ಈ ರಾಹುಲ್ ಬೀಳಗಿಯನ್ನ ಪೊಲೀಸ್ರು ಏನಾದ್ರೂ ಅರೆಸ್ಟ್ ಮಾಡಿದ್ದಾರಾ, ಬಂಧನವನ್ನ ಖಂಡಿಸಿ ಡಿಸಿ ಆಫೀಸ್ ಎದುರು ಆತನ ಬೆಂಬಲಿಗರು ಪ್ರತಿಭಟಿಸ್ತಿರೋದಾ.. ಯಾಕಾಗಿ ಇಂತಾ ಪರಿಸ್ಥಿತಿ ಸೃಷ್ಠಿಯಾಗಿದೆ ಗೊತ್ತಾ.. ಈ ರಾಹುಲ್ ಅರೆಸ್ಟೂ ಆಗಿಲ್ಲ, ಮತ್ತ್ಯಾವ ಗಲಾಟೆನೂ ಮಾಡಿಲ್ಲ.. ಬದಲಾಗಿ ಆಗಿರೋದು ಬರ್ಬರ ಕೊಲೆ.

ಭೂಸನೂರು ಗ್ರಾಮದ ಕಾಂಗ್ರೆಸ್ ಮುಖಂಡ ಹಾಗೂ ಕೊಲೆ ಕೇಸ್ ಆರೋಪಿ ಬಾಬುಗೌಡ ಪಾಟೀಲ್ ಹಾಗೂ ಬಿಜೆಪಿ ಮಾಜಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಲಕ್ಷ್ಮಣ್ ಬೀಳಗಿ ಇದೀಗ ಕಟು ಶತೃಗಳೇ ಹೌದು. ಆದ್ರೆ, ಇವರಿಬ್ಬರ ಕುಟುಂಬಗಳ ನಡುವಿನ ಶತೃತ್ವ ಕೇವಲ ಐದಾರು ವರ್ಷಗಳ ಹಿಂದಿನದ್ದಷ್ಟೇನೆ. ಅದಕ್ಕೂ ಮೊದಲು, ಊರ ಮುಖಂಡರಾದ ಅವರಿಬ್ಬರೂ ಒಳ್ಳೆ ಸ್ನೇಹಿತರು. ಆದ್ರೆ ಯಾವಾಗ ರಾಜಕೀಯ ಅನ್ನೋದು ಅರಾಜಕೀಯವಾಯ್ತೋ ಆಗಿಂದಾನೇ ಎರಡೂ ಕುಟುಂಬಗಳ ನಡುವೆ ರಾಜಕೀಯ ದ್ವೇಷ ಸಣ್ಣಗೆ ಹೊಗೆಯಾಡ್ತಿತ್ತು. ಆ ಹಗೆಯ ಹೊಗೆ ಜಾಸ್ತಿ ಆಗ್ತಾ ಆಗ್ತಾ ದಳ್ಳುರಿಯಾಗಿ ಹೊತ್ತಿ ಉರಿಯೋದಕ್ಕೆ ಶುರುವಾಗಿತ್ತು.

ಅದೆಷ್ಟರ ಮಟ್ಟಿಗೆ ಅಂದ್ರೆ ಊರಲ್ಲಿ ಯಾರೇ ಜಗಳ ಆಡಿದ್ರೂ ಅದು ಯಾವ ಕಾರಣಕ್ಕಾದ್ರೂ ಸರಿನೇ ಹಿಂದೆ ಮುಂದೆ ವಿಚಾರಿಸದೆ ಬಾಬುಗೌಡ ಪಾಟೀಲ್ ಹಾಗೂ ಲಕ್ಷ್ಮಣ್ ಬೀಳಗಿ ಒಬ್ಬೊಬ್ಬರ ಪರವಾಗಿ ನಿಂತು ಕಾದಾಡೋದಕ್ಕೆ ಶುರು ಮಾಡ್ತಿದ್ರು.ಹೀಗಿರಬೇಕಾದ್ರೆ ಮೂರು ತಿಂಗಳ ಹಿಂದೆ ನಡೆದ ವಿಧಾನಸಭಾ ಎಲೆಕ್ಷನ್ ನಲ್ಲಿ ಆಳಂದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ ಸುಭಾಷ್ ಗುತ್ತೇದಾರ್ ಎಂಎಲ್ಎ ಆಗಿದ್ರು. ಅತ್ತ ಅತಿಹೆಚ್ಚು ಸೀಟುಗಳನ್ನ ಗೆದ್ದ ಬಿಜೆಪಿ ಅತಂತ್ರ ಸ್ಥಿತಿಯ ನಡುವೆಯೇ ಸರ್ಕಾರ ರಚನೆಯತ್ತ ಹೋಗಿತ್ತು. ಆಗ ಬಿಎಸ್ ಯಡಿಯೂರಪ್ಪ ಸಿಎಂ ಆಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದರು.

ಅತ್ತ ಬೆಂಗಳೂರಲ್ಲಿ ರಾಜ್ಯ ರಾಜಕಾರಣದ ಬೆಳವಣಿಗೆ ನಡೀತಿದ್ದರೆ ಇತ್ತ ಭೂಸನೂರು ತಾಂಡಾದಲ್ಲಿ ಬಿಜೆಪಿ ಮುಖಂಡ ಲಕ್ಷ್ಮಣ್ ಬೀಳಗಿ ಹಾಗೂ ಮಗ ರಾಹುಲ್ ಪಟಾಕಿ ಸಿಡಿಸಿ ನಮ್ಮವರರೇ ಎಂಎಲ್ಎ ನಮ್ಮವರೇ ಸಿಎಂ ನಮ್ಮದೇ ಸರ್ಕಾರ ಅಂತ ಕುಣಿದು ಕೇಕೆ ಹಾಕಿದ್ದರು. ಆಗ ಬಾಬುಗೌಡ ಪಾಟೀಲ್ ಕಡೆಯವರು ಹಲ್ಲು ಕಡಿದುಕೊಂಡು ಜಗಳಕ್ಕೆ ನಿಂತಿದ್ರು. ಆದ್ರೆ ಮೂರೇ ದಿನಕ್ಕೆ ಯಡಿಯೂರಪ್ಪ ಸಿಎಂ ಕುರ್ಚಿ ಕಳೆದುಕೊಂಡು, ನಂತರ ಸಮ್ಮಿಶ್ರ ಸರ್ಕಾರ ಬಂದಾಗ ಸರದಿ ಆರೋಪಿ ಬಾಬುಗೌಡ ಪಾಟೀಲ್ ಹಾಗೂ ಅವನ ಮನೆಮಂದಿಯದ್ದಾಗಿತ್ತು.ಹೀಗಿರಬೇಕಾದ್ರೆ ಕೆಲ ದಿನಗಳ ಹಿಂದೆ ಊರಲ್ಲಿ ಆಶ್ರಯ ಮನೆ ಹಂಚಿಕೆ ವಿಚಾರದಲ್ಲೂ ಜಗಳ ಶುರುವಾಗಿತ್ತು. ಆಗ ಇದೇ ರಾಹುಲ್, ಆ ಬಾಬುಗೌಡ ಯಾವ ಸೀಮೆ ದೊಣ್ಣೆ ನಾಯಕ, ಅವನಿಲ್ಲ ಅಂದ್ರೆ ಏನೂ ಅಂತ ತಗಾದೆ ತೆಗೆದಿದ್ದ.

ಆಗಲೂ ಕೂಡ ಎರಡೂ ಕಡೆಯವರು ಕೈ ಕೈ ಮಿಲಾಯಿಸಿದ್ದರು.ಈ ಹಿಂದೆಯೂ ಸಹ ಹತ್ತಾರು ಬಾರಿ ಜಗಳ ನಡೆದು ಪೊಲೀಸ್ ಠಾಣೆಗೆ ಹೋಗಿದ್ದರು ಎರಡೂ ಕಡೆಯವರು. ಆದ್ರೆ ಸ್ಟೇನ್ನಿಗೆ ಹೋದಾಗಲೆಲ್ಲಾ ಪೊಲೀಸ್ರ ಮುಂದೆನೇ ಕಾದಾಡ್ತಿದ್ದರಂತೆ. ಇನ್ನೊಂದು ವಿಚಾರ ಅಂದ್ರೆ ಇದು ಎಷ್ಟೇ ಜಗಳ ಆಡಿ ತಲೆ ಬುರುಡೆ ಹೊಡ್ಕೊಂಡ್ರೂ ಪೊಲೀಸ್ ಕಂಪ್ಲೇಂಟ್ ಕೊಡೋದಕ್ಕೆ ಎರಡೂ ಕಡೆಯವರು ಒಪ್ಪುತ್ತಿರಲಿಲ್ಲ. ಹೀಗೆ ಪದೇ ಪದೇ ಕಿತ್ತಾಡ್ತಿದ್ದವರು ಕೊಲೆ ಮಾಡೋ ಮಟ್ಟಿಗೂ ಯೋಚನ ಮಾಡಿದ್ರಂತೆ. ಹತ್ತೆಕರೆ ಹೊಲ ಹೋದ್ರೂ ಎಷ್ಟೇ ಖರ್ಚಾದ್ರೂ ಪರವಾಗಿಲ್ಲ ಅವರಿಗೆ ಒಂದು ಗತಿ ಕಾಣಿಸ್ಲೇಬೇಕು ಅನ್ನೋವರೆಗೆ ಪ್ರತಿಷ್ಠೆಯಾಗಿ ಕಾಲುಕೆರೆದುಕೊಂಡು ಕಾದಾಟಕ್ಕೆ ನಿಂತುಬಿಡ್ತಿದ್ರು.

ಹೀಗೆ ರಾಜಕೀಯ ಜಿದ್ದು ಎಗ್ಗಿಲ್ಲದೆ ನಡೀತಿತ್ತು. ಈ ನಡುವೆ ರಾಹುಲ್ ಅಪ್ಪನ ವಾರಸ್ಥಾರನಾಗಿ ರಾಜಕೀಯವಾಗಿ ಗುರುತಿಸಿಕೊಂಡು ಓಡಾಡ್ತಿದ್ದ. ಬಿಜೆಪಿಯ ದಲಿತ ಮುಖಂಡನಾಗಿ ಗುರುತಿಸಿಕೊಂಡು ಶಾಸಕ ಸುಭಾಷ್ ಗುತ್ತೇದಾರ್ ಪರವಾಗಿ ಕೆಲಸ ಮಾಡ್ತಾ ಪರಮಾಪ್ತನಾಗಿದ್ದ. ಅಷ್ಟೊತ್ತಿಗಾಗಲೇ ರಾಜಕೀಯ ವಿರೋಧಿಗಳು ಕತ್ತಿಮಸೀತಿದ್ರು. ಇವನನ್ನ ಹೀಗೆ ಬಿಟ್ರೆ ಮುಂದೆ ನಮಗೆ ಉಳಗಾಲವಿಲ್ಲ ಅಂತ ಮುಗಿಸೋ ನಿರ್ಧಾರಕ್ಕೆ ಬಂದುಬಿಟ್ಟಿದ್ರು. ಅಷ್ಟೇ ಈ ರಾಹುಲ್ ಊರಲ್ಲಿ ಸುತ್ತಮುತ್ತಲ ತಾಂಡಾಗಳಲ್ಲಿ ತನ್ನದೇ ಹವಾ ಮೇಟೆಂನ್ ಮಾಡ್ತಿದ್ದ. ಧಮಕಿ ಹಾಕೋದು ಸುಲಿಗೆ ಮಾಡೋ ಕೆಲಸಗಳಿಗೂ ತಲೆ ಹಾಕಿದ್ದ ಅನ್ನೋ ಆರೋಪಗಳೂ ಕೇಳಿ ಬಂದಿದ್ವು. ಆದ್ರೆ ಅದು ಎಷ್ಟರ ಮಟ್ಟಿಗೆ ಸತ್ಯವೋ ಸುಳ್ಳೋ ಗೊತ್ತಿಲ್ಲ.

ಆದ್ರೆ ಈ ರಾಹುಲ್ ಗೆ ಅದಾಗಲೇ ಸಾವು ಬಂದು ಹೆಗಲೇರಿತ್ತು. ದುಶ್ಮನ್ ಗಳೆಲ್ಲಾ ಒಂದಾಗಿ ಸ್ಕೆಚ್ ಹಾಕಿ ಪ್ಲಾನ್ ಮಾಡಿ ರಾಹುಲ್ ನನ್ನ ಕೊಂದು ಮುಗಿಸೇ ಬಿಟ್ಟಿದ್ರು.ಹೀಗೆ ಮರ್ಡರ್ ಮಾಡಿದವ್ರು ಹೊಟ್ಟೆ ತುಂಬಾ ಹಾಲು ಕುಡಿದು ಮುಂಬೈ, ಸೋಲಾಪುರ, ವಿಜಯಪುರ ಹೀಗೆ ಬೇರೆ ಬೇರೆ ಕಡೆ ತಲೆ ಮರೆಸಿಕೊಂಡಿದ್ರು. ಆದ್ರೆ ಆರೋಪಿಗಳ ಬೇಟೆಗೆ ಇಳಿದಿದ್ದ ಪೊಲೀಸರು ಎಲ್ಲರ ಹೆಡೆಮುರಿ ಕಟ್ಟಿ ಎತ್ತಾಕೊಂಡು ಬಂದಿತ್ತು. ಇನ್ನಾ ಕೇಸ್ ನ ಮುಖ್ಯ ಆರೋಪಿ ಬಾಬುಗೌಡ ಪಾಟೀಲ್ ಮತ್ತೆ ಕೆಲವರು ತಲೆ ಮರೆಸಿಕೊಂಡಿದ್ದಾರೆ.

ಇವತ್ತಲ್ಲಾ ನಾಳೆ ಅವರಿಗೂ ಕಂಬಿ ಎಣಿಸ್ಲೇಬೇಕಾಗುತ್ತೆ. ಆದ್ರೆ ಬಿಸಿಲನಾಡಲ್ಲಿ ರಾಜಕೀಯ ದ್ವೇಷಕ್ಕೆ ಬಿಜೆಪಿಯ ಯುವ ಮುಖಂಡನೊಬ್ಬನ ಬಿಸಿ ನೆತ್ತರು ಹರಿದಿತ್ತು.ನೋಡಿದ್ರಲ್ಲಾ ರಾಜಕೀಯ ದ್ವೇಷಕ್ಕೆ ಬಿಸಲನಾಡಲ್ಲಿ ಹರಿದ ನೆತ್ತರ ಕಹಾನಿಯನ್ನ. ಆ ರಾಜಕೀಯ ದ್ವೇಷ ಒಂದು ಕೊಲೆಯೊಂದಿಗೆ ಮುಗಿಯೋ ಲಕ್ಷಣ ಕಾಣ್ತಿಲ್ಲ. ಯಾಕಂದರೆ ತಮ್ಮವನನ್ನ ಕಳೆದುಕೊಂಡವರು ಮನಸಲ್ಲಿರೋ ಹಗೆ ಇನ್ನೂ ಹೊಗೆಯಾಡುತ್ತಲೇ ಇದೆ. ಅದು ಮುಂದೆ ಏನ್ಮಾಡುತ್ತೋ ಏನೋ..

LEAVE A REPLY

Please enter your comment!
Please enter your name here