ನಿರ್ಮಿಸಿದ ಒಂದೇ ವರ್ಷದಲ್ಲಿ ಕೊಚ್ಚಿ ಹೋದ ಸೇತುವೆ: ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಜಿಲ್ಲೆ

ರಾಮನಗರ : ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಮತ್ತು ಬಾಣಗಹಳ್ಳಿ ನಡುವಿನ ಕಣ್ವ ನದಿಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ಸೇತುವೆ ನಿರ್ಮಾಣ ಮಾಡಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ರಾಮನಗರ ಜಿಲ್ಲೆಯಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ನೀರಿನ ರಭಸಕ್ಕೆ ಸೇತುವೆ ಕುಸಿದುಬಿದ್ದಿದೆ. ಕಣ್ವ ಜಲಾಶಯದಿಂದ ಹೆಚ್ಚಿನ ನೀರು ಹೊರಬಿಟ್ಟಿರುವ ಕಾರಣ ಸೇತುವೆ ಕುಸಿದಿದೆ.

ಗ್ರಾಮಗಳಲ್ಲಿನ ಜನರು ಇದೀಗ ಹತ್ತಾರು ಕಿಲೋ ಮೀಟರ್​ಗಟ್ಟಲೆ ಸುತ್ತಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಕಳಪೆ ಕಾಮಗಾರಿಯೇ ದುಸ್ಥಿತಿಗೆ ಕಾರಣವಾಗಿದ್ದು, ನಿರ್ಮಾಣ ಹಂತದಲ್ಲಿಯೇ ಸೇತುವೆಯ ಕಳಪೆ ಕಾಮಗಾರಿ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ತಾಂತ್ರಿಕವಾಗಿ ಹಾಕಬೇಕಿದ್ದ ಕಬ್ಬಿಣ ಬಳಸದೇ ಸೇತುವೆ ನಿರ್ಮಾಣ ಮಾಡಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

ಸಿಮೆಂಟ್ ಜೊತೆಗೆ ಮರಳು ಮಣ್ಣು ಬಳಕೆ ಮಾಡಿದ್ದ ಬಗ್ಗೆ ಸ್ಥಳೀಯರಿಂದ ದೂರು ಬಂದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಹಿನ್ನೆಲೆಯಲ್ಲಿ ಸೇತುವೆ ಕುಸಿದಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಆದಷ್ಟು ಬೇಗ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published.