
ನಗರದಲ್ಲಿ ಕಲಾ ಬೋಧಕರ ಕಲೆ ಗುರುತಿಸಲು ಕಲಾಪ್ರದರ್ಶನಕ್ಕೆ ಬನ್ನಿ
ಬೇರೆಲ್ಲಾ ವಿಷಯಗಳ ಬೋಧಕರಿಗಿಂತ ಕಲಾ ವಿಷಯದ ಬೋಧಕರಿಗೆ ಸಮಾಜದಲ್ಲಿ ಮನ್ನಣೆ ಕಡಿಮೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಈ ಕಲಾ ಬೋಧಕರು ಇನ್ನೂ ಎಲೆಮರೆ ಕಾಯಿಯಂತೆಯೇ ಇದ್ದಾರೆ. ಸಾವಿರದಲ್ಲಿ ಒಬ್ಬರೋ ಇಬ್ಬರೋ ಮಾತ್ರವೇ ಹೆಸರು ಮಾಡಿ ಗುರುತಿಸಿಕೊಳ್ತಿದ್ದಾರೆ. ಇಲ್ಲವೇ ಸರ್ಕಾರದ ಯಾವುದಾದರೂ ಪ್ರಶಸ್ತಿ ಬಂದರೆ ಮಾತ್ರವೇ ಈ ಕಲಾವಿದರುಗಳ ಹೆಸರನ್ನು ಪತ್ರಿಕೆಯಲ್ಲಿ ನೋಡುವಂತಾಗಿದೆ. ಆದರೆ ಇದನ್ನು ಸುಳ್ಳು ಮಾಡಲೆಂದು ಫಿಡಿಲಿಟಸ್ ಗ್ಯಾಲರಿ ಪಣತೊಟ್ಟು ಕೆಲಸ ಮಾಡುತ್ತಿದೆ. ಫಿಡಿಲಿಟಸ್ ಕಾರ್ಪ್ನ ಅಂಗಸಂಸ್ಥೆಯಾಗಿರುವ ಫಿಡಿಲಿಟಸ್ ಗ್ಯಾಲರಿ ಕಳೆದ 8 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರತಿ ತಿಂಗಳೂ ಒಂದೊಂದು ವಿಶೇಷ ಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಈ ಫೆಬ್ರವರಿ 19 ರಿಂದ 27 ರವರೆಗೆ, ವಿಶೇಷ ಕಲಾ ಪ್ರದರ್ಶನವನ್ನು ಫಿಡಿಲಿಟಸ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನೆ ಇಂದು ಸಂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್ಎ ಮತ್ತು ನೈಸ್ ಸಂಸ್ಥೆ ಎಂಡಿ ಶ್ರೀ ಅಶೋಕ್ ಖೇಣಿ, ಕೆಎಸ್ಆರ್ಪಿ ಎಡಿಜಿಪಿ ಶ್ರೀ ಅಲೋಕ್ ಕುಮಾರ್ ಐಪಿಎಸ್, ಲಹರಿ ಸಂಸ್ಥೆಯ ಎಂಡಿ ವೇಲು, ಖ್ಯಾತ ಕಲಾ ಇತಿಹಾಸಗಾರ್ತಿ ಡಾ.ಪ್ರಮೀಳಾ ಲೋಚನ್ ಹಾಗೂ ಫಿಡಿಲಿಟಸ್ ಕಾರ್ಪ್ ಎಂಡಿ ಶ್ರೀ ಅಚ್ಚತ್ ಗೌಡ ಅವರು ಪಾಲ್ಗೊಂಡಿದ್ದರು.
ಕಲಾ ಪ್ರದರ್ಶನದಲ್ಲಿ ಕಲಾವಿದರ ಕಲಾಕೃತಿಗಳನ್ನಷ್ಟೇ ನೋಡಬಹುದು. ಆದ್ರೆ ಕಲಾವಿದರನ್ನು ಸೃಷ್ಟಿ ಮಾಡುವವರ ಕೈಯಿಂದ ಸೃಷ್ಟಿಯಾದ ಕಲಾಕೃತಿಗಳು ಕಾಣಸಿಗುವುದಿಲ್ಲ. ಈ ವಿಶೇಷ ಪ್ರದರ್ಶನದಲ್ಲಿ ಬೆಂಗಳೂರಿನ ಹಲವು ಕಲಾ ಕೇಂದ್ರಗಳಲ್ಲಿ ವಿವಿಧ ಕಲಾ ಪ್ರಾಕಾರಗಳನ್ನು ಹೇಳಿಕೊಡುವ ಬೋಧಕರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬನಶಂಕರಿ 2ನೇ ಹಂತದಲ್ಲಿರುವ ಫಿಡಿಲಿಟಸ್ ಗ್ಯಾಲರಿಯಲ್ಲಿ, “CONSORTIUM-Art Preceptors of Bengaluru Art Institutions” ಎನ್ನುವ ಹೆಸರಲ್ಲಿ ಈ ಕಲಾ ಪ್ರದರ್ಶನ ಜರುಗಲಿದ್ದು, ಈ ಕಲಾ ಪ್ರದರ್ಶನದಲ್ಲಿ 10 ಹಿರಿಯ ಕಲಾ ಬೋಧಕರ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು. ಈ ಮೂಲಕ ಸಾವಿರಾರು ಕಲಾವಿದರನ್ನು ಸೃಷ್ಟಿಸುವ ಎಲೆಮರೆ ಕಾಯಿಯಂತಿರುವ ಬೋಧಕರ ಕಲಾಕೃತಿಗಳಿಗೆ ಮಾರುಕಟ್ಟೆ ಸೃಷ್ಟಿಸುವುದು ಈ ಪ್ರದರ್ಶನದ ಪ್ರಮುಖ ಉದ್ದೇಶ.
ಈ ಪ್ರದರ್ಶನದಲ್ಲಿ ಮಾರಾಟವಾಗುವ ಕಲಾಕೃತಿಗಳಿಂದ ಬರುವ ಹಣದಲ್ಲಿ ಶೇ25 ರಷ್ಟನ್ನು ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಶಿಲ್ಪಾ ಫೌಂಡೇಷನ್ಗೆ ನೀಡಲಾಗುತ್ತದೆ. ಕಲಾ ಬೋಧಕರ ಕುಂಚದಿಂದ ತಯಾರಾದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವು ಇದೇ ಫೆಬ್ರವರಿ 27 ರ ವರೆಗೆ ಒಂಬತ್ತು ದಿನಗಳ ಕಾಲ ಇರಲಿದ್ದು, ಕಲಾಸಕ್ತರು ಈ ಸದವಕಾಶವನ್ನು ಉಪಯೋಗಿಸಿಕೊಂಡು ಕಲಾ ಬೋಧಕರನ್ನು ಬೆಂಬಲಿಸಿ.