Home Cinema ಅಸಾಧ್ಯ.. ಅಸಂಭವ.. ಕೊರೊನಾ ನಿಯಮಾವಳಿಯಂತೆ ಚಿತ್ರೀಕರಣ ? ಕೊರೊನಾ ಪ್ಲ್ಯಾನ್ ಉಲ್ಪಾ ಪಲ್ಟಾ.. ಭಾರತೀಯ ಚಿತ್ರರಂಗ...

ಅಸಾಧ್ಯ.. ಅಸಂಭವ.. ಕೊರೊನಾ ನಿಯಮಾವಳಿಯಂತೆ ಚಿತ್ರೀಕರಣ ? ಕೊರೊನಾ ಪ್ಲ್ಯಾನ್ ಉಲ್ಪಾ ಪಲ್ಟಾ.. ಭಾರತೀಯ ಚಿತ್ರರಂಗ ತಲ್ಲಣ..

310
0
SHARE

ಬೆಂಗಳೂರು. ನಿನ್ನೆಯಷ್ಟೇ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ 2000 ಗಡಿ ದಾಟಿಬಿಟ್ಟಿದೆ. ಆಗಲೋ ಈಗಲೋ ಸಿನಿಮಾ ಚಟುವಟಿಕೆಗಳು ಶುರುವಾಗುತ್ತೆ ಎಂಬ ಆಸೆಗಳಿಗೆ ತೀಲಾಂಜಲಿ ಇಡೋ ಬ್ಯಾಡ್ ಟೈಮ್ ಬಂದಿದೆ. ಈ ಹಿಂದೆ ಶೂಟಿಂಗ್ ಸೆಟ್‌ಗಳಲ್ಲಿ ಹೇಗಿರಬೇಕು ಅಂತ ರಾಜ್ಯಸರ್ಕಾರ ಹೊಸ ಸಿನಿಮಾ ಮಾರ್ಗಸೂಚಿಯನ್ನ ರಿಲೀಸ್ ಮಾಡಿತ್ತು. ಬಟ್, ಕೊರೊನಾ ಮಹಾಮಾರಿಗೆ ಸಿಲುಕಿ ಸ್ವಲ್ಪ ಸುಧಾರಿಸಿಕೊಂಡಿದ್ದ ಸ್ಯಾಂಡಲ್‌ವುಡ್ ಈಗ ಈ ಹೊಸ ನಿಯಮಗಳನ್ನ ಹೇಗೆ ಪಾಲಿಸುತ್ತೆ ಎನ್ನುವ ಪ್ರಶ್ನೆಯೂ ಸೃಷ್ಟಿಯಾಗಿದೆ. ಯಾಕಂದ್ರೆ ಸೀಮಿತ ಜಗತ್ತಿನಲ್ಲೇ ಸಿನಿಮಾ ತಯಾರಿಸೋದು ಮಾತನಾಡಿದಷ್ಟು ಸುಲಭವಲ್ಲ. ಹಾಗಾಗಿಯೇ ಈಗ ಚಿತ್ರರಂಗ ಮತ್ತೊಂದು ಪೇಚಿಗೆ ಸಿಲುಕಿಕೊಂಡಂತಾಗಿದೆ. ಕೆಲವು ಮೂರು ಮತ್ತೊಂದು ಸಿನಿಮಾಗಳ ಶೂಟಿಂಗ್ ಬಿಟ್ರೆ ದೊಡ್ಡ ಬ್ಯಾನರ್‌ನ ಸಿನಿಮಾಗಳು ಶುರುವಾಗದೇ ಫುಲ್ ಸೈಲೆಂಟಾಗಿಬಿಟ್ಟಿವೆ.

ಸಿನಿಮಾ ಶೂಟಿಂಗ್ ನಡೆಸುವಾಗ ಸಾಮಾಜಿಕ ಅಂತರವನ್ನ ನಿಭಾಯಿಸಬೇಕು ಎನ್ನುವುದು ಸರ್ಕಾರದ ಬ್ರೇಕಿಂಗ್ ರೂಲ್. ಈ ಹಿಂದೆ ಸೀರಿಯಲ್ ಶೂಟಿಂಗ್‌ಗೆ ಅನುಮತಿ ಕೊಟ್ಟಗಲೂ ಇದೇ ನಿಯಮಗಳಿತ್ತು. ಆದರೆ ಇದು ಸಿನಿಮಾಗೆ ಪ್ರಾಕ್ಟಿಕಲಿ ಎಷ್ಟು ವರ್ಕೌಟ್ ಆಗುತ್ತೆ ಎನ್ನುವ ಪ್ರಶ್ನೆ ಈದೀಗ ಸಿನಿಮಾಮಂದಿಯನ್ನ ಬೆಂಬಡಿದೆ ಕಾಡ್ತಿದೆ. ಯಾಕಂದ್ರೆ ಸಿನಿಮಾ ತಯಾರಿಕೆಗೆ ಒಂದು ಪ್ರಾಪರ್ ಪ್ಲಾನಿಂಗ್ ನಡೆದಿರುತ್ತೆ. ಹೆಚ್ಚಿನ ತಂತ್ರಜ್ಞರ ಹಾಗೂ ಕಲಾವಿದರ ಅವಶ್ಯಕತೆಯಿರುತ್ತೆ. ಸೋ, ಬಿಗ್‌ಬಜೆಟ್‌ನ ಸಿನಿಮಾಗಳಂತೂ ಈ ನಿಯಮಗಳನ್ನ ಬೆನ್ನಿಗೆ ಕಟ್ಟಿಕೊಂಡು ಶೂಟಿಂಗ್ ಫೀಲ್ಡ್‌ಗೆ ಇಳಿಯೋದು ಸ್ವಲ್ಪ ಕಷ್ಟ. ಅರ್ಧಂರ್ಭದ ಶೂಟಿಂಗ್ ಮುಗಿಸಿಕೊಂಡವರಿಗೂ ಈಗ ಈ ಹೊಸ ರೂಲ್ಸ್ ನುಂಗಲಾಗದ ಬಿಸಿತುಪ್ಪವಾಗಿ ಕಾಣಿಸ್ತಿದೆ.

ಸರ್ಕಾರ ಕೊರೋನಾ ಭೀತಿಯಲ್ಲಿದೆ. ಶೂಟಿಂಗ್‌ಗೆ ಅನುಮತಿ ಕೊಡುವಾಗ್ಲೂ ಈ ಸಮಸ್ಯೆಗಳನ್ನ ಗಮನದಲ್ಲಿಟ್ಟುಕೊಂಡೇ ಪರ್ಮಿಶನ್ ಕೊಡೋಕೆ ಹಿಂದೇಟು ಹಾಕಿತ್ತು. ಆದರೆ ಬಣ್ಣದ ಬದುಕು ನಂಬಿದವರ ಜೀವನ ಮೂರಾಬಟ್ಟೆಯಾಗೋ ಕಾಲ ಹತ್ತಿರಬಂದಹಾಗೇ ಲಾಕ್‌ಡೌನ್ ಸಡಿಲಿಕೆಯ ಭಾಗವಾಗಿ ಈಗಾಗಲೇ ಅರ್ಧಭಾಗ ಶೂಟಿಂಗ್ ಮುಗಿಸಿಕೊಂಡ ಚಿತ್ರಗಳಿಗೆ ಅಸ್ತು ಎಂದಿತ್ತು. ಆದರೆ ಇಲ್ಲಿ ಹೊಸ ಸಿನಿಮಾ ಜಾಗವಿಲ್ಲ ಎನ್ನುವ ಅಂಶವೂ ನೆನಪಿರಲಿ ಸುಮಾರು 60-70 ಸಿನಿಮಾಗಳು ಇನ್ನು ಟೇಕಾಫ್ ಆಗಿಲ್ಲ. ಅದರಲ್ಲೂ ಮುಹೂರ್ತ ಮುಗಿಸಿಕೊಂಡು ಶೂಟಿಂಗ್ ಶುರುಮಾಡಲು ಕಾಯ್ತಿರೋ ಚಿತ್ರತಂಡಗಳ ಗೋಳು ಕೇಳೊರು ಯಾರು ಇಲ್ಲ ಬಿಡಿ.

 

 

ಲಾಕ್‌ಡೌನ್ ಯಾವಾಗ ಕಂಪ್ಲೀಟ್ ಆಗಿ ಮುಗಿಯುತ್ತೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಕ್ಲಿಯರ್ ಕಟ್ ಉತ್ತರವಿಲ್ಲ. ಶೂಟಿಂಗ್ ಶುರುವಾದ್ರೂ ಕೂಡ ರಿಲೀಸ್ ಫಿಕ್ಸ್ ಆಗದೇ ಹೋದ್ರೆ ನಿರ್ಮಾಪಕರಿಗೆ ನಿದ್ರೆ ಬರಲ್ಲ. ಸೋ, ಕಲೆಕ್ಷನ್ ನೋಡದ ಗಾಂಧಿನಗರ ಈಗ ಪರಿತಪಿಸುತ್ತಿದೆ. ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆಯಲ್ಲೇ ಕಾಲಕಳೆಯುತ್ತಿದೆ. ಸಿನಿಮಾನೇ ಜೀವನ, ಇದು ಬಿಟ್ರೆ ಬೇರೆನೂ ಗೊತ್ತಿಲ್ಲ ಎನ್ನೊರಿಗೆ ಖಾಲಿಹೊಟ್ಟೆಯಲ್ಲಿ ಮಲಗಬೇಕಾದ ಪರಿಸ್ಥಿತಿ ಬಂದಿದೆ. ಶೂಟಿಂಗ್ ಶುರುವಾದರೂ ಕೆಲಸವಿಲ್ಲದೇ ಮನೆಯಲ್ಲಿ ಕೂತು ಅವಕಾಶಕ್ಕಾಗಿ ಎದುರು ನೋಡ್ತಿರೋ ಕಲಾವಿದರು ಹಾಗೂ ತಂತ್ರಜ್ಞರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಶೋ ಬಿಜಿನೆಸ್ ಅಕ್ಷರಶಃ ನೆಲಕಚ್ಚಿದೆ. ನಮ್ಮ ಸ್ಥಿತಿ ಸುಧಾರಿಸೋದು ಯಾವಾಗ ಎಂಬ ಭಯದಲ್ಲೇ ಎಲ್ಲರೂ ದಿನದೂಡುವಂತಾಗಿದೆ. ಇದೇ ಭಯದಲ್ಲಿ ಕನ್ನಡದ ಸೌಂಡ್ ಬ್ರೇಕಿಂಗ್ ಚಿತ್ರಗಳ ಶೂಟಿಂಗ್ ಮುಂದಕ್ಕೆ ಹೋಗಿದೆ.

ದರ್ಶನ್ ಅಭಿನಯದ ರಾಜವೀರಮದಕರಿ, ಸುದೀಪ್ ಅಭಿನಯದ ಫ್ಯಾಟಂ ಹಾಗೂ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಶೂಟಿಂಗ್ ಮತ್ತೆ ಮುಂದಕ್ಕೆ ಹೋಗಿದೆ. ಇದಕ್ಕೆ ನೇರಕಾರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋ ಕೊರೋನಾ ಕಾಟ. ರಾಜ್ಯಸರ್ಕಾರ ಶೂಟಿಂಗ್‌ಗೆ ಪರ್ಮಿಶನ್ ಕೊಟ್ಟಿರೋದು ನಾಮಕವಸ್ಥೆ ಎನ್ನುವಂತಾಗಿದೆ. ಬಿಗ್ ಬಜೆಟ್ ಚಿತ್ರಗಳು ಈ ನಿಯಮಗಳನ್ನ ಪಾಲಿಸಿಕೊಂಡು ಶೂಟಿಂಗ್ ಮಾಡೋದು ಇಂಪಾಸಿಬಲ್ ಸ್ವಾಮಿ ಎನ್ನುವ ನೋವಿನ ಕೂಗು ಕೇಳಿಬಂದಿದೆ. ಇದೇ ರೀತಿ ಕೊರೋನಾ ಓಟ ಮುಗಿಯದಿದ್ರೆ ಚಿತ್ರರಂಗದ ಕೆಲಸಗಳು ಶುರುವಾಗೋದು ಕನಸಿನ ಮಾತು. ಚಿತ್ರಗಳಿಗೆ ಬಂಡವಾಳ ಹೂಡಿದ್ದ ನಿರ್ಮಾಪಕರು ಅನುಭವಿಸ್ತಿರೋ ಸಮಸ್ಯೆಗಳನ್ನ ಲೆಕ್ಕಹಾಕ್ತಾ ಹೋದ್ರೆ ಈ ದಿನ ಮುಗಿಯದು. ಸಾಲ ಮಾಡ್ಕೊಂಡು ಸಿನಿಮಾ ಮಾಡಿದ್ದ ಎಷ್ಟೋ ಸಿನಿಮಾಮೇಕರ್‌ಗಳಿಗೆ ಈ ಡೆಡ್ಲಿ ಕೊರೋನಾ ಮೃತ್ಯು ಪಾಶದಂತೆ ಕಾಣಿಸ್ತಿದೆ.

ಇನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ 777 ಚಾರ್ಲಿ  ಕೂಡ ಹೊರರಾಜ್ಯದಲ್ಲೇ ಶೂಟ್ ಆಗೋ ಅನಿವಾರ್ಯತೆಯಿದೆ. ಶಿಮ್ಲಾ ಹಾಗೂ ಕಾಶ್ಮಿರದ ಸುಂದರ ಲೊಕೆಷನ್‌ಗಳಲ್ಲಿ 777 ಚಾರ್ಲಿ ಶೂಟಿಂಗ್ ನಡೆಯಬೇಕಿತ್ತು. ಆದರೆ ಕೋರೊನಾ ಈ ಐಡಿಯಾಗಳನ್ನ ಉಲ್ಟಾ ಮಾಡಿಬಿಟ್ಟಿದೆ. 777 ಚಾರ್ಲಿ ಸಿನಿಮಾದ ನಿರ್ದೆಶಕ ಕಿರಣ್‌ರಾಜ್ ಈ ವಿಷಯವಾಗಿ ಶಾನೆ ತಲೆಕೆಡಿಸಿಕೊಂಡಿದ್ದಾರೆ. ಚಿತ್ರದ ಮುಕ್ಕಾಲು ಭಾಗ ಶೂಟಿಂಗ್ ಮುಗಿದಿದೆ. ಆದರೆ ಚಿತ್ರದ ಮೈನ್ ಸಿಕ್ವೆನ್ಸ್‌ಗಳು ಅಲ್ಲಿಯೇ ಚಿತ್ರೀಕರಣವಾಗಬೇಕಿದೆ. ಇದನ್ನ ಹೇಗೆ ಪ್ಲಾನ್ ಮಾಡೋದು ಎನ್ನುವ ತಲೆನೋವು ಈಗ 777 ಚಾರ್ಲಿ  ಚಿತ್ರತಂಡದ್ದು.

ಈ ಬೆಳವಣಿಗೆಗಳ ಮಧ್ಯೆಯೇ ಬಾಲಿವುಡ್‌ನ ನಿರ್ದೇಶಕ ಅನುಭವ್ ಸಿನ್ಹಾ ಒಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಸಿನಿಮಾ ಮೇಕಿಂಗ್‌ನಲ್ಲಿ ಸಾಮಾಜಿಕ ಅಂತರ ಅಸಾಧ್ಯ. ನಾವೆಲ್ಲರೂ ನಮಗೆ ನಾವೇ ಸುಳ್ಳು ಹೇಳಿಕೊಂಡು ಸಮಾಧಾನಪಡಿಸಿಕೊಳ್ಳುತ್ತಿದ್ದೇವೆ. ನಾನು ಆಯುಷ್ಮಾನ್ ಖುರಾನ ಜೊತೆ ಸಿನಿಮಾ ಮಾಡಬೇಕಿತ್ತು, ಬಟ್, ಸಧ್ಯಕ್ಕಂತೂ ಅದು ಸಾಧ್ಯವಿಲ್ಲ. ಯಾಕಂದ್ರೆ ಸಿನಿಮಾಗಿಂತ ಸೆಟ್‌ನಲ್ಲಿರೋ ಜನರ ಸುರಕ್ಷತೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತೆ ಎನ್ನುವ ವಾದವನ್ನ ಮಂಡಿಸಿದ್ದಾರೆ. ಈ ವಾದಕ್ಕೆ ಹಲವು ನಿರ್ದೆಶಕರ ಬೆಂಬಲವೂ ಸಿಕ್ಕಿದೆ.

ಈಗಾಗಲೇ ಕೆಲವರು ಸಿನಿಮಾ ಬಿಟ್ಟು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಪರಿಪೂರ್ಣವಾಗಿ ಕೊರೋನಾ ನಮ್ಮೆಲ್ಲರ ಜೀವನಗಳಿಂದ ಯಾವಾಗ ತೋಲಗುತ್ತೆ ಅಂತ ನಿಖರವಾಗಿ ಹೇಳಲಾಗದು. ಆದರೆ ಇಂದು ಸಿನಿಮಾಕೆಲಸ ಶುರುವಾಗುತ್ತೆ, ನಾಳೆ ಶುರುವಾಗುತ್ತೆ ಎಂಬ ಕನಸಿನಲ್ಲಿದ್ದವರಿಗೆ ಕೊರೋನಾ ಪಂಚ್ ಸರಿಯಾಗೇ ಬಿದ್ದಿದೆ. ನಮ್ಮ ಕನ್ನಡ ಭಾಷೆ ಮಾತ್ರವಲ್ಲದೇ ಎಲ್ಲ ಭಾಷೆಗಳ ಇಂಡಸ್ಟ್ರಿ ಇದೇ ಸಮಸ್ಯೆಯನ್ನ ಎದುರಿಸ್ತಿದೆ. ಮತ್ತೆ ಲಾಕ್‌ಡೌನ್ ಆದ್ರಂತೂ ಮುಗಿತು. ಸಿನಿಮಾಗಳ ಶೂಟಿಂಗ್ ಶುರುಹಚ್ಚಿಕೊಂಡವರಿಗೆ ಇನ್ನೊಮ್ಮೆ ಗಾಯದಮೇಲೆ ಬರೆ ಎಳೆದಂತಾಗುತ್ತೆ. ಅಂತೂ ದಿನದಿಂದದಿನಕ್ಕೆ ಜಾಸ್ತಿಯಾಗ್ತಿರೋ ಕೊರೋನಾ ಅಟ್ಟಹಾಸದ ಮುಂದೆ ಬಣ್ಣದ ಲೋಕ ಅಧೋಗತಿಯನ್ನ ತಲುಪುತ್ತಾ ಎನ್ನುವ ಉತ್ತರಿಸಲಾಗದ ಪ್ರಶ್ನೆ ನಮ್ಮಮುಂದೆಯೇ ತಾಂಡವವಾಡ್ತಿದೆ.

 

LEAVE A REPLY

Please enter your comment!
Please enter your name here