
ಮಾದಕ ವ್ಯಸನಿಗಳೇ ಎಚ್ಚರ..! ಡ್ರಗ್ಸ್ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸರ ವಿನೂತನ ಪ್ಲ್ಯಾನ್
ಬೆಂಗಳೂರು: ಬೆಂಗಳೂರಿನಲ್ಲಿ ಮಾದಕ ವಸ್ತುಗಳ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ಕೆ ಮುಂದಾಗಿದೆ. ಸೈಬರ್ ಕ್ರೈಂ, ಡ್ರಗ್ಸ್ ನಿಗ್ರಹಕ್ಕಾಗಿ ಹದ್ದಿನ ಕಣ್ಣಿಡಲು ಸಜ್ಜಾಗಿರುವ ಬೆಂಗಳೂರು ದಕ್ಷಿಣ ವಲಯ ಪೊಲೀಸರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಮಾದಕ ವಸ್ತುಗಳ ದಂಧೆ ತಡೆಯಲು ಶ್ವಾನದಳ ಪಡೆಯಿಂದ ಪರಿಶೀಲನೆಗೆ ಅಣಿಯಾಗಿದ್ದಾರೆ. ವಾರಕ್ಕೊಮ್ಮೆ ಕಾಲೇಜುಗಳು , ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಡಾಗ್ ಸ್ಕ್ವಾಡ್ ಪರಿಶೀಲನೆ ನಡೆಸಲಾಗುವುದು. ಈ ರೀತಿಯ ಹೊಸ ಪ್ರಯತ್ನದಿಂದಾಗಿ ಡ್ರಗ್ ಪೆಡ್ಲರ್ ಅಷ್ಟೇ ಅಲ್ಲದೇ ವ್ಯಸನಿಗಳನ್ನು ಸಹ ನಿಗ್ರಹಿಸುವುದು ನಮ್ಮ ಉದ್ದೇಶ. ಈಗಾಗಲೇ ಡಾಗ್ ಸ್ಕ್ವಾಡ್ ಪರಿಶೀಲನೆ ವೇಳೆ ಮೂವರು ಡ್ರಗ್ ವ್ಯಸನಿಗಳನ್ನು ಬಂಧಿಸಲಾಗಿದೆ. ಕುಮಾರ್, ರಿಜ್ವಾನ್, ಮಹೇಶ್ ಎಂಬ ಮಾದಕ ವ್ಯಸನಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.