
ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ, ಯುವ ಉದ್ಯಮಿ ಕೀರ್ತನ್ ಕುಮಾರ್ ಎಎಪಿ ಸೇರ್ಪಡೆ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಶಿಕ್ಷಣ ತಜ್ಞ ಸೌಂದರ್ಯ ಮಂಜಪ್ಪ ಹಾಗೂ ಅವರ ಮಗ ಕೀರ್ತನ್ ಕುಮಾರ್ರವರು ಬೆಂಗಳೂರಿನ ಪರಾಗ್ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮಾಜಿ ಹಿರಿಯ ಐಪಿಎಸ್ ಅಧಿಕಾರಿ- ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ರವರ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸೌಂದರ್ಯ ಮಂಜಪ್ಪರವರು ಕೆಪಿಸಿಸಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿದ್ದರು.
ಸೌಂದರ್ಯ ಎಜುಕೇಷನಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾಗಿ 6000 ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ 500 ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಸೌಂದರ್ಯ ಮಂಜಪ್ಪನವರು ಹೋಟೆಲ್ ಉದ್ಯಮಿ ಕೂಡ ಹೌದು. ಅವರು ದಾಸರಹಳ್ಳಿ ಕ್ಷೇತ್ರದ ಸೌಂದರ್ಯ ನಗರ ನಿವಾಸಿಗಳ ಹಿತರಕ್ಷಣಾ ಸಂಘಟನೆಯ ಗೌರವಾಧ್ಯಕ್ಷರು, ಕರಾವಳಿ ಮಿತ್ರಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಹಾವನೂರ್ ಎಕ್ಸ್ಟೆನ್ಷನ್ನ ಅಧ್ಯಕ್ಷರು.ನೆರೆ ಪರಿಹಾರ ಸಂತ್ರಸ್ತರಿಗೆ ಆರ್ಥಿಕ ಸಹಾಯ, ಸ್ವಂತ ಉದ್ಯೋಗಾಸಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಬಡವರಿಗೆ ಪಡಿತರ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಬ್ಯಾಗ್ ಹಾಗೂ ರಿಯಾಯಿತಿ ಶಿಕ್ಷಣ ನೀಡುವುದು – ಮುಂತಾದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.