
ವಿದ್ಯುತ್ ಸ್ಪರ್ಶದಿಂದ ಸಂಭವಿಸಿದ ಸಾವು ಪ್ರಕರಣ: 1.28 ಕೋಟಿ ಪರಿಹಾರ ಪಾವತಿಗೆ ಸೂಚನೆ
ಬೆಂಗಳೂರು: ವಿದ್ಯುತ್ ಅಪಘಾತದಿಂದ ಸಂಭವಿಸಿದ ಸಾವು – ನೋವಿನ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಒಟ್ಟು 1 ಕೋಟಿ 28 ಲಕ್ಷ ರೂ. ಪರಿಹಾರ ವಿತರಣೆ ಮಾಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಕರೆಂಟ್ ತಗುಲಿ ಅಸುನೀಗಿದ ಒಬ್ಬ ವ್ಯಕ್ತಿಯ ಪತ್ನಿ ಹಾಗೂ ಗಾಯಾಳುಗಳಾಗಿರುವ ಇಬ್ಬರು ಅಪ್ರಾಪ್ತ ಸಂತ್ರಸ್ತರ ನೆರವಿಗೆ ಹೈಕೋರ್ಟ್ ಧಾವಿಸಿದೆ. 2017-18ರ ಅವಧಿಯಲ್ಲಿ ನಡೆದಿರುವ ಮೂರು ಪ್ರತ್ಯೇಕ ವಿದ್ಯುತ್ ಅಪಘಾತ ಪ್ರಕರಣಗಳಲ್ಲಿ ₹1.28 ಕೋಟಿ ಪರಿಹಾರ ಪಾವತಿಸಲು ಕೆಪಿಟಿಸಿಎಲ್ ಮತ್ತು ಬೆಸ್ಕಾಂಗೆ ನಿರ್ದೇಶನ ನೀಡಿದೆ.
ರಾಜ್ಯ ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಹಾರ ನೀಡದಿರುವ ಸರ್ಕಾರಿ ವಿದ್ಯುತ್ ಕಂಪನಿಗಳ ಕ್ರಮವು ಮನಸೋ ಇಚ್ಛೆಯಿಂದ ಕೂಡಿದೆ. ಸೂಕ್ತ ಪರಿಹಾರ ವಿತರಿಸದಿರುವುದು ಪರಿಹಾರ ವಿತರಿಸುವ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಓವರ್ಹೆಡ್ ಕರೆಂಟ್ ಲೈನ್ಗಳಿಂದ ವಿದ್ಯುತ್ ಅಪಘಾತ ಸಂಭವಿಸಿದರೆ ಮುಖ್ಯ ಎಲೆಕ್ಟ್ರಿಕಲ್ ನಿರೀಕ್ಷಣಾ ಕಚೇರಿಯ ವರದಿಗಾಗಿ ಕಾಯದೇ ಎರಡು ತಿಂಗಳಲ್ಲಿ ವಿದ್ಯುತ್ ಪೂರೈಕೆ ಕಂಪನಿಗಳು ಸಂತ್ರಸ್ತರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ.