ಕೌಟುಂಬಿಕ ಕಲಹ: ವಿದ್ಯುತ್ ಹೈಟೆನ್ಷನ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ಜಿಲ್ಲೆ

ಹುಬ್ಬಳ್ಳಿ: ಹೆಸ್ಕಾಂ ಅಧಿಕಾರಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಹೈಟೆನ್ಷನ್ ಮಾರ್ಗದ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬರು ಬದುಕುಳಿದ ಘಟನೆ  ನಡೆಸಿದೆ. ಇಲ್ಲಿನ ಬಿಡ್ನಾಳದ 11 ಕೆವಿ ಹೈಟೆನ್ಷನ್ ಟವರ್ ಮೇಲೆ ಹತ್ತಿದ ವ್ಯಕ್ತಿಯನ್ನು ಬದುಕಿಸುವಲ್ಲಿ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಾಘವೇಂದ್ರ ಬಳ್ಳಾರಿ ಎನ್ನುವ ವ್ಯಕ್ತಿ ಟಾವರ್ ಹತ್ತಿದ್ದಾನೆ. ಕೆಳಗೆ ಇಳಿಯುವಂತೆ ಕೆಲವರು ಕೂಗುತ್ತಿದ್ದರೂ ಟಾವರ್ ಏರಿದ್ದಾನೆ.

ಕೂಡಲೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಹೆಸ್ಕಾಂ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಯಾವ ಲೈನ್ ಎಂಬುವುದು ಖಾತರಿಯಾಗದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಹೋಗುವ ಎಲ್ಲಾ ಮಾರ್ಗಗಳ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಇದಾದ ಕೆಲವೇ ಸೆಕೆಂಡ್‌ಗಳಲ್ಲಿ ಹೈ ಟೆನ್ಷನ್ ವೈರ್ ಸ್ಪರ್ಶಿಸಿದ್ದಾನೆ. ಆದರೆ ವಿದ್ಯುತ್ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ವ್ಯಕ್ತಿ ಬದುಕುಳಿದಿದ್ದಾನೆ. ಕೌಟುಂಬದ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗುತ್ತಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ, ಪೊಲೀಸ್: ವ್ಯಕ್ತಿಯೊಬ್ಬರ ಕರೆ ಮಾಡುತ್ತಿದ್ದಂತೆ ಹೆಸ್ಕಾಂ ಗ್ರಾಮೀಣ ಉಪವಿಭಾಗದ ಕಾರ್ಯಾನಿರ್ವಾಹಕ ಅಭಿಯಂತರ ಕಿರಣಕುಮಾರ ಅವರು ಎಲ್ಲಾ ಮಾರ್ಗದ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌ಗೆ ವಿಷಯ ಮುಟ್ಟಿಸಿದ್ದರು. ಘಟನೆ ಸ್ಥಳ ಬೆಂಡಿಗೇರಿ ಠಾಣೆ ವ್ಯಾಪ್ತಿಯಲ್ಲಿದ್ದ ಕಾರಣ ಬೆಂಡಿಗೇರಿ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಅಷ್ಟೊತ್ತಿಗಾಗಲೇ ನೆರೆದಿದ್ದ ಜನರು ವ್ಯಕ್ತಿಯನ್ನು ಕೆಳಗಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ವ್ಯಕ್ತಿಯ ಕುಟುಂಬದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಘಟನೆ ನಡೆಯಿತು.

ದಾರಿಯಲ್ಲಿ ಹೋಗುತ್ತಿದ್ದವರು ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದರು. ಆದರೆ ಯಾವ ಮಾರ್ಗ ಎನ್ನುವುದು ಖಾತರಿಯಾ ಗಲಿಲ್ಲ. ಕೂಡಲೇ ಸಿಬ್ಬಂದಿ ಮೂಲಕ ಎಲ್ಲಾ ಮಾರ್ಗಗಳ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು. ವ್ಯಕ್ತಿಗೆ ಯಾವುದೇ ಗಾಯ ಅಥವಾ ಪ್ರಾಣ ಹಾನಿ ಆಗಿಲ್ಲ. ಸಕಾಲಕ್ಕೆ ಸ್ಥಳೀಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರಿಂದ ನಾವು ಕೂಡಲೇ ಕಾರ್ಯಪ್ರವೃತ್ತರಾಗಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ.

Leave a Reply

Your email address will not be published.