ತಂದೆಗೆ ಹೃದಯಾಘಾತವಾಗಿಲ್ಲ: ಸ್ಪಷ್ಟನೆ ನೀಡಿದ ನಟ ವಿಕ್ರಂ ಪುತ್ರ

ಚಲನಚಿತ್ರ

ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಅವರಿಗೆ ನಿನ್ನೆ ಮಧ್ಯಾಹ್ನ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ವಿಷಯ ತಿಳಿದ ಅಭಿಮಾನಿಗಳು ನಟನಿಗೆ ಯಾವುದೇ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸಿದ್ದರು. ಇದೀಗ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯ ಬಗ್ಗೆ ವಿಕ್ರಂ ಪುತ್ರ ಸ್ಪಷ್ಟನೆ ನೀಡಿದ್ದಾರೆ.

ಸಂಜೆ ವೇಳೆಗೆ ವಿಕ್ರಂ ಆರೋಗ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ಚೆನ್ನೈನ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ‘ವಿಕ್ರಂ ಆರೋಗ್ಯವಾಗಿದ್ದಾರೆ, ಅವರಿಗೆ ಎದೆ ನೋವಾಗಿದೆಯೇ ವಿನಃ ಅವರಿಗೆ ಹೃದಯಾಘಾತವಾಗಿಲ್ಲ” ಎಂದು ಸ್ಪಷ್ಟಪಡಿಸಿತು.

ಇದೀಗ ವಿಕ್ರಂರ ಪುತ್ರ ಧೃವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ, ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಜೊತೆಗೆ ತಂದೆಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ.

”ಈ ಸಮಯದಲ್ಲಿ ಅವರಿಗೆ ಹಾಗೂ ನಮ್ಮ ಕುಟುಂಬಕ್ಕೆ ಖಾಸಗಿತನದ ಅವಶ್ಯಕತೆ ಇದೆ. ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ. ಚಿಯಾನ್ ವಿಕ್ರಂ ಈಗ ಆರಾಮವಾಗಿದ್ದಾರೆ, ಅವರು ಇನ್ನೊಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಲಿದ್ದಾರೆ. ನನ್ನ ಈ ಹೇಳಿಕೆಯು ಎಲ್ಲ ಸುಳ್ಳು ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿದೆ ಎಂದುಕೊಂಡಿದ್ದೇನೆ” ಎಂದು ಧೃವ್ ಬರೆದುಕೊಂಡಿದ್ದಾರೆ.

ವಿಕ್ರಂ ಆರೋಗ್ಯವಾಗಿದ್ದಾರೆ. ಗಾಬರಿ ಆಗುವಂತದ್ದೂ ಏನು ಇಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published.