ಫಿಡಿಲಿಟಸ್ ಆರ್ಟ್ ಗ್ಯಾಲರಿಯಲ್ಲಿ ಬಣ್ಣಗಳ ಕಲರವ: ಕಲಾ ಪ್ರದರ್ಶನಗಳ ಹಬ್ಬಕ್ಕೆ ಕ್ಷಣಗಣನೆ

ಬೆಂಗಳೂರು ಲೈಫ್ ಸ್ಟೈಲ್

ಬೆಂಗಳೂರು:  ಬೇರೆಲ್ಲಾ ವಿಷಯಗಳ ಬೋಧಕರಿಗಿಂತ ಕಲಾ ವಿಷಯದ ಬೋಧಕರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಇತರೆ ವಿಷಯಗಳ ಬೋಧಕರಿಗಿಂತ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಈ ಕಲಾ ಬೋಧಕರು ಇನ್ನೂ ಎಲೆಮರೆ ಕಾಯಿಯಂತೆಯೇ ಇದ್ದಾರೆ. ಸಾವಿರದಲ್ಲಿ ಒಬ್ಬರೋ ಇಬ್ಬರೋ ಮಾತ್ರವೇ ಹೆಸರು ಮಾಡಿ ಗುರುತಿಸಿಕೊಳ್ತಿದ್ದಾರೆ. ಇಲ್ಲವೇ ಸರ್ಕಾರದ ಯಾವುದಾದರೂ ಪ್ರಶಸ್ತಿ ಬಂದರೆ ಮಾತ್ರವೇ ಈ ಕಲಾವಿದರುಗಳ ಹೆಸರನ್ನು ಪತ್ರಿಕೆಯಲ್ಲಿ ನೋಡುವಂತಾಗಿದೆ.  ಯಾಕೆಂದರೆ ಸಮಾಜ ಕಲಾವಿದರಿಗೆ ಕೊಡುತ್ತಿರುವ ಬೆಲೆ ಇಷ್ಟೇ. ಇದನ್ನು ಸುಳ್ಳು ಮಾಡಲೆಂದು ಫಿಡಿಲಿಟಸ್ ಗ್ಯಾಲರಿ ಪಣತೊಟ್ಟು ಕೆಲಸ ಮಾಡುತ್ತಿದೆ.

ಫಿಡಿಲಿಟಸ್ ಕಾರ್ಪ್​ನ ಅಂಗ ಸಂಸ್ಥೆಯಾಗಿರುವ ಫಿಡಿಲಿಟಸ್ ಗ್ಯಾಲರಿ ಕಳೆದ 8 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಹಾಗೂ ಫಿಡಿಲಿಟಸ್ ಗ್ಯಾಲರಿ ವತಿಯಿಂದ ಪ್ರತಿ ತಿಂಗಳೂ ಒಂದೊಂದು ವಿಶೇಷ ಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದೇ ರೀತಿ ಈ ಫೆಬ್ರವರಿ 19 ರಿಂದ 27 ರವರೆಗೆ, 9 ದಿನಗಳ ಕಾಲ ವಿಶೇಷ ಕಲಾ ಪ್ರದರ್ಶನವನ್ನು ಫಿಡಿಲಿಟಸ್ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರತಿ ಕಲಾ ಪ್ರದರ್ಶನದಲ್ಲಿ ಕಲಾವಿದರ ಕಲಾಕೃತಿಗಳನ್ನಷ್ಟೇ ನೋಡಬಹುದು. ಆದ್ರೆ ಕಲಾವಿದರನ್ನು ಸೃಷ್ಟಿ ಮಾಡುವವರ ಕೈಯಲ್ಲಿ ಸೃಷ್ಟಿಯಾಗುವ ಕಲಾಕೃತಿಗಳು ಎಲ್ಲಿಯೂ ಕಾಣಸಿಗುವುದೇ ಇಲ್ಲ. ಹಾಗಾಗಿ ಈ ವಿಶೇಷ ಪ್ರದರ್ಶನದಲ್ಲಿ ಬೆಂಗಳೂರಿನ ಹಲವು ಕಲಾ ಕೇಂದ್ರಗಳಲ್ಲಿ ವಿವಿಧ ಕಲಾ ಪ್ರಾಕಾರಗಳನ್ನು ಹೇಳಿಕೊಡುವ ಬೋಧಕರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಬನಶಂಕರಿ 2ನೇ ಹಂತದಲ್ಲಿರುವ ಫಿಡಿಲಿಟಸ್ ಗ್ಯಾಲರಿಯಲ್ಲಿ, “CONSORTIUM-Art Preceptors of Bengaluru Art Institutions” ಎನ್ನುವ ಹೆಸರಲ್ಲಿ ಈ ಕಲಾ ಪ್ರದರ್ಶನ ಜರುಗಲಿದೆ. ಈ ಕಲಾ ಪ್ರದರ್ಶನದಲ್ಲಿ 10 ಹಿರಿಯ ಕಲಾ ಬೋಧಕರ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು. ಈ ಮೂಲಕ ಸಾವಿರಾರು ಕಲಾವಿದರನ್ನು ಸೃಷ್ಟಿಸುವ ಎಲೆಮರೆ ಕಾಯಿಯಂತಿರುವ ಬೋಧಕರ ಕಲಾಕೃತಿಗಳಿಗೆ ಮಾರುಕಟ್ಟೆ ಸೃಷ್ಟಿಸುವುದು ಈ ಪ್ರದರ್ಶನದ ಪ್ರಮುಖ ಉದ್ದೇಶ.

ಎಲ್ಲ ರೀತಿಯ ಆಸ್ತಿ ನಿರ್ವಹಣಾ ಸೇವೆಯಲ್ಲಿ (all in one property service-www.fidelituscorp.com) ಬೆಂಗಳೂರಿನಲ್ಲಿಯೇ ಅತ್ಯುನ್ನತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಫಿಡಿಲಿಟಸ್ ಕಾರ್ಪ್​​​ನ ಅಂಗ ಸಂಸ್ಥೆಯಾಗಿದೆ ಫಿಡಿಲಿಟಸ್ ಗ್ಯಾಲರಿ. ಈ ಗ್ಯಾಲರಿಯ ಪ್ರಮುಖ ಚಿತ್ರ ಕಲಾವಿದ ಕೋಟೆಗದ್ದೆ ರವಿ ಈಗಾಗಲೇ ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದ ಹೆಸರುವಾಸಿ ಕಲಾವಿದರಾಗಿದ್ದು, ಈಗಾಗಲೇ ತಮ್ಮ ಕುಂಚದಿಂದ ಸಾವಿರಾರು ಕಲಾಕೃತಿಗಳನ್ನು ರಚಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದರಲ್ಲಿ ಹಲವಾರು ಕಲಾಕೃತಿಗಳು ಹಲವು ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ, ಎಂಎನ್​ಸಿ ಕಂಪನಿಗಳಲ್ಲಿ ಮತ್ತು ಖಾಸಗೀ ಕಲಾ ಸಂಗ್ರಹಕಾರರ ಬಳಿ ರಾರಾಜಿಸುತ್ತಿದೆ. ಇವರು ಸ್ಪೀಡ್ ಪೇಂಟಿಂಗ್​​ ಮಾಡುವಲ್ಲಿ ಸಿದ್ಧ ಹಸ್ತರಾಗಿದ್ದು ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಇವರು ಕಲಾಕೃತಿಗಳನ್ನು ಸ್ಥಳದಲ್ಲಿಯೇ ಕೆಲವೇ ನಿಮಿಷಗಳಲ್ಲಿ ರಚಿಸಿ ಪ್ರಶಂಸೆ ಗಿಟ್ಟಿಸಿದ್ದಾರೆ.

ಈ ಫಿಡಿಲಿಟಸ್ ಆರ್ಟ್ ಗ್ಯಾಲರಿಯು ನೂರಾರು ಇತರೆ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನ ಮಾಡಿ ಅವರಿಗೆ ಬದುಕನ್ನು ರೂಪಿಸಿಕೊಟ್ಟಿದೆ. ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಮತ್ತು ಎಂಡಿ ಅಚ್ಚುತ್ ಗೌಡರ ಕನಸಿನ ಕೂಸಾಗಿರುವ ಆರ್ಟ್ ಗ್ಯಾಲರಿ ಬೆಂಗಳೂರಿನಲ್ಲಿರುವ ಪ್ರಮುಖ ಕಲಾ ಪ್ರದರ್ಶನ ಗ್ಯಾಲರಿಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿದೆ. ಅಲ್ಲದೇ ಗ್ಯಾಲರಿಯಲ್ಲಿ ಮಾರಾಟವಾಗುವ ಕಲಾಕೃತಿಗಳಿಂದ ಬರುವ ಹಣದಲ್ಲಿ ಶೇ25 ರಷ್ಟನ್ನು ಶಿಲ್ಪಾ ಫೌಂಡೇಷನ್​​ಗೆ ನೀಡಲಾಗುತ್ತದೆ. ಅಂದಹಾಗೆ ಅಚ್ಚುತ್ ಗೌಡರ ಮತ್ತೊಂದು ಕನಸಿನ ಕೂಸು ಈ ಶಿಲ್ಪಾ ಫೌಂಡೇಷನ್. ಈ ಮೂಲಕ ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಕರ್ನಾಟಕದಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ವಿದ್ಯಾಭ್ಯಾಸ, ಪರಿಸರ ಸಂರಕ್ಷಣೆ, ಹಾಗೂ ಆರೋಗ್ಯ ಸಂಬಂಧಿತ ಕಾರ್ಯಗಳಲ್ಲಿ ಫೌಂಡೇಷನ್ ಕೆಲಸ ಮಾಡುತ್ತಿದ್ದು, ಹಲವರ ಸಹಕಾರದಿಂದ ಕೆಲವೇ ಸಮಯದಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ.

“ಈ ರೀತಿ ಅತ್ಯುತ್ತಮ ಹಿನ್ನೆಲೆ ಹೊಂದಿರುವ ಫಿಡಿಲಿಟಸ್ ಗ್ಯಾಲರಿಯಿಂದ ಆಯೋಜನೆ ಮಾಡಿರುವ ಕಲಾ ಬೋಧಕರ ಕುಂಚದಿಂದ ತಯಾರಾದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವು ಒಂಬತ್ತು ದಿನಗಳ ಕಾಲ ಇರಲಿದ್ದು, ಕಲಾಸಕ್ತರು ಮತ್ತು ಸಾರ್ವಜನಿಕರು ಈ ಸದವಕಾಶವನ್ನು ಉಪಯೋಗಿಸಿಕೊಳ್ಳಬೇಕು” ಎಂದು ಗ್ಯಾಲರಿ ಸಂಸ್ಥಾಪಕ ಅಚ್ಚುತ್ ಗೌಡ ಅವರು ಹೇಳಿದರು.

Leave a Reply

Your email address will not be published.