ರಾಷ್ಟ್ರಪತಿ ಸ್ಥಾನ’ಕ್ಕೆ ಇಂದು ಚುನಾವಣೆ: ವಿಧಾನಸೌಧದ ಮತ ಕೇಂದ್ರದಲ್ಲಿ ಸಕಲ ಸಿದ್ಧತೆ

ಬೆಂಗಳೂರು

ಬೆಂಗಳೂರು: ರಾಷ್ಟ್ರಪತಿ ಸ್ಥಾನ’ಕ್ಕೆ ಇಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ವಿಧಾನಸೌಧದಲ್ಲಿ ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಬಿಜೆಪಿ ಬೆಂಬಲಿತ ಎನ್‍ಡಿಎ ಅಭ್ಯರ್ಥಿ ದ್ರೌಪದಿಮುರ್ಮು ಹಾಗೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಬೆಂಬಲಿತ ಅಭ್ಯರ್ಥಿ ಯಶವಂತ್ ಸಿನ್ಹಾಕಣದಲ್ಲಿದ್ದು, ಇಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದೆ. ರಾಜ್ಯದ ಶಾಸಕರು ಹಾಗೂ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ವಿಧಾನಸೌಧದಲ್ಲಿ ಮತ ಚಲಾಯಿಸಿದ್ದಾರೆ. ಆಡಳಿತರೂಢ ಬಿಜೆಪಿ ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ 224 ಮಂದಿ ವಿಧಾನಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಇದೇ ವೇಳೆ ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಆನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲೇ ಮತ ಚಲಾಯಿಸಲು ಲೋಕಸಭೆ ಸ್ಪೀಕರ್ ಕಚೇರಿಯಿಂದ ಅನುಮತಿ ಪಡೆದುಕೊಂಡಿದ್ದಾರೆ. ಮತದಾನಕ್ಕೆ ಬ್ಯಾಲೆಟ್ ಪೇಪರ್ ಬಳಕೆ ಮಾಡುತ್ತಿದ್ದು, ವಿಧಾನಸಭಾ ಸದಸ್ಯರು ಚುನಾವಣಾಧಿಕಾರಿಗಳು ನೀಡುವ ನೇರಳೆ ಬಣ್ಣದ ಲೇಖನಿಯನ್ನೇ ಬಳಕೆ ಮಾಡಿ ಮತದಾನ ಮಾಡಬೇಕು. ಇತರೆ ಯಾವುದೇ ಲೇಖನಿ ಬಳಕೆ ಮಾಡಿದರೆ ಆ ಮತ ಅಸಿಂಧುವಾಗಲಿದೆ. ಶಾಸಕರು ಮತವನ್ನು ಗೌಪ್ಯವಾಗಿಡುವ ಸಲುವಾಗಿ ಮತಪತ್ರವನ್ನು ಮಡಿಚಿ ಮತಪೆಟ್ಟಿಗೆಯೊಳಗೆ ಹಾಕಬೇಕೆಂದು ಸೂಚಿಸಲಾಗಿದೆ.

 

 

Leave a Reply

Your email address will not be published.