
ವರ್ಷದೊಳಗೆ ಎರಡನೇ ಬಾರಿಗೆ ಕಾವೇರಿಗೆ ಬಾಗೀನ ಅರ್ಪಿಸಿದ ಸಿಎಂ ಬೊಮ್ಮಾಯಿ
ಮಂಡ್ಯ :- ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಕಾವೇರಿಗೆ ಬಾಗೀನ ಅರ್ಪಿಸಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ವರ್ಷದೊಳಗೆ ಎರಡನೇ ಬಾರಿಗೆ ಬಾಗೀನ ಅರ್ಪಿಸಿದ ಖ್ಯಾತಿಗೆ ಸಿಎಂ ಪಾತ್ರರಾದರು.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಬಾಗೀನ ಅರ್ಪಿಸಿದ ನಂತರ ಕೆ.ಆರ್.ಎಸ್ ಗೆ ಆಗಮಿಸಿದ ಮುಖ್ಯಮಂತ್ರಿಯನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಜಲಾಶಯಕ್ಕೆ ಕರೆತರಲಾಯಿತು.ಬಳಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಜಿಲ್ಲೆಯ ಶಾಸಕರೊಂದಿಗೆ ತುಂಬಿ ತುಳುಕುತ್ತಿರುವ ಕಾವೇರಿ ಮಾತೆಗೆ ಬಾಗೀನ ಅರ್ಪಿಸಿ ನಂತರ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಅನ್ನದಾನಿ, ಎಂ.ಶ್ರೀನಿವಾಸ್, ದಿನೇಶ್ ಗೂಳಿಗೌಡ, ಮಧು.ಜಿ.ಮಾದೇಗೌಡ ಹಾಗೂ ಇತರರು ಇದ್ದರು.