ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ನಳಿನಿ ಶ್ರೀಹರನ್

ರಾಷ್ಟ್ರೀಯ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳಲ್ಲಿ ಒಬ್ಬರಾಗಿರುವ ನಳಿನಿ ಶ್ರೀಹರನ್ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನಳಿನಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೂ ಮೊದಲು ನಳಿನಿ ಅವರು ಬಿಡುಗಡೆ ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತ್ತು. ಹೀಗಾಗಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ಅರ್ಜಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್, ಸಂವಿಧಾನದ 142ನೇ ಪರಿಚ್ಛೇದದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಹೊಂದಿರುವ ವಿಶೇಷ ಅಧಿಕಾರಗಳನ್ನು ತಾನು ಹೊಂದಿಲ್ಲ. ಆದ್ದರಿಂದ 2022ರ ಮೇ ತಿಂಗಳಲ್ಲಿ ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ನಂತೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈ ಹಿಂದೆ ಪ್ರಕರಣದ ಮತ್ತೊರ್ವ ಸಹ ಅಪರಾಧಿ ಪಿ.ರವಿಚಂದ್ರನ್ ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಇದೀಗ 30 ವರ್ಷಗಳಿಂದ ಜೈಲಿನಲ್ಲಿರುವ ರವಿಚಂದ್ರನ್ ಅವರು ಔಪಚಾರಿಕ ಬಿಡುಗಡೆಗಾಗಿ ತಮ್ಮ ಪ್ರಕರಣವು ಮುಕ್ತಾಯಗೊಳ್ಳುವವರೆಗೆ ಮಧ್ಯಂತರ ಜಾಮೀನು ಕೋರಿದ್ದಾರೆ.

ಪೆರಾರಿವಾಲನ್ ಬಿಡುಗಡೆಯ ನಂತರ, ರವಿಚಂದ್ರನ್ ಅವರು ತನ್ನನ್ನೂ ಸೇರಿದಂತೆ ಉಳಿದ ಆರು ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರ ಕಳುಹಿಸಿದ್ದರು. ರಾಜ್ಯಪಾಲರು ಮೂರು ವರ್ಷಗಳಿಂದ ಬಿಡುಗಡೆಯ ಕಡತಗಳನ್ನು ಪರಿಗಣಿಸದೆ ಇರಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ ಎಂದು ಖಂಡಿಸಿದ್ದರು.

ಸೆಪ್ಟೆಂಬರ್ 2018ರಲ್ಲಿ ತಮಿಳುನಾಡು ಸರ್ಕಾರ ಮಾಡಿದ ಶಿಫಾರಸಿನ ಆಧಾರದ ಮೇಲೆ ಜೈಲಿನಿಂದ ಅವಧಿಪೂರ್ವ ಬಿಡುಗಡೆಗಾಗಿ ಪೆರಾರಿವಾಲನ್ ಅವರ ಮನವಿಯನ್ನು ಪುರಸ್ಕರಿಸಿ, ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಆದರೆ ಇತರ ಆರು ಅಪರಾಧಿಗಳು ಜೈಲಿನಲ್ಲಿದ್ದಾರೆ.

Leave a Reply

Your email address will not be published.