
ಪ್ರಧಾನಿಯಾದ ಮೊದಲ ದಿನದಿಂದಲೇ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಬ್ರಿಟನ್ನ ನೂತನ ಪ್ರಧಾನಿಯಾಗಲಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಕಂಡುಬರುತ್ತಿದೆ, ಬ್ರಿಟನ್ನ ಮುಂದಿನ ಪ್ರಧಾನಿಯಾಗಲು ನಾನಾ ಆಕಾಂಕ್ಷಿಗಳಿದ್ದರೂ, ಈ ಪೈಕಿ ರಿಷಿ ಸುನಕ್ ಇಂಗ್ಲೆಂಡ್ನ ನೂತನ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು, ರಿಷಿ ಸುನಕ್ ಅಂತಾರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ್ದು, ಚೀನಾ ವಿರುದ್ಧ ಭಾನುವಾರ ಗುಡುಗಿದ್ದಾರೆ.
ಬ್ರಿಟನ್ನ ಆಡಳಿತಾರೂಢ ಕನ್ಸರ್ವೇಟೀವ್ ಪಕ್ಷದಲ್ಲಿರುವ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವ ರೇಸ್ನಲ್ಲಿದ್ದು, ಲಿಜ್ ಟ್ರುಸ್ ವಿರುದ್ಧ ತುರುಸಿನ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಬ್ರಿಟನ್ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ವಿರುದ್ಧ ಇತ್ತೀಚೆಗೆ ಲಿಜ್ ಟ್ರುಸ್ ಆರೋಪ ಮಾಡಿದ್ದಾರೆ. ರಿಷಿ ಚೀನಾ ಹಾಗೂ ರಷ್ಯಾದ ವಿರುದ್ಧ ದುರ್ಬಲರಾಗಿದ್ದಾರೆ ಎಂದು ಲಿಜ್ ಆರೋಪಿಸಿದ್ದರು.
ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ರಿಷಿ ಸುನಕ್, ಚೀನಾದ ವಿರುದ್ಧ ಗುಡುಗಿದ್ದಾರೆ. ತಾನು ಪ್ರಧಾನಿಯಾದ ಮೊದಲ ದಿನದಿಂದಲೇ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಚೀನಾದ ವಿರುದ್ಧ ರಿಷಿ ಸುನಕ್ ಕೈಗೊಳ್ಳುವ ಪ್ರಸ್ತಾವನೆಗಳು ಹೀಗಿವೆ ನೋಡಿ..
ಬ್ರಿಟನ್ನಲ್ಲಿರುವ ಎಲ್ಲ 30 ಕನ್ಫ್ಯೂಶಿಯಸ್ ಸಂಸ್ಥೆಗಳನ್ನು ಮುಚ್ಚುವ ಒಲವನ್ನು ರಿಷಿ ಹೊಂದಿದ್ದು, ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನೀ ಪ್ರಭಾವದ ಮೃದು ಶಕ್ತಿಯ ಹರಡುವಿಕೆಯನ್ನು ತಡೆಯುವುದು ಇದರ ಉದ್ದೇಶ ಎಂದು ತಿಳಿದುಬಂದಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾಲಯಗಳಿಂದ ಚೀನಾದ ಕಮ್ಯೂನಿಸ್ಟ್ ಪಕ್ಷ (ಸಿಸಿಪಿ) ವನ್ನು ಕಿತ್ತುಹಾಕುವುದಾಗಿಯೂ ರಿಷಿ ಸುನಕ್ ಭರವಸೆ ನೀಡಿದ್ದಾರೆ.