
ಆನ್ ಲೈನ್ ಮೂಲಕ ಕಿಡ್ನಿ ಮಾರಾಟ ಮಾಡಲು ಹೋಗಿ 86 ಲಕ್ಷ ಕಳೆದುಕೊಂಡ ಭೂಪ..!
ಬೆಂಗಳೂರು: ಆನ್ಲೈನ್ನಲ್ಲಿ ಕಿಡ್ನಿ ಮಾರಾಟ ಮಾಡಿದರೆ ಕೋಟಿ ಹಣ ಸಿಗುತ್ತದೆ ಎಂಬ ಸುದ್ದಿ ನಂಬಿದ ವ್ಯಕ್ತಿಯೊಬ್ಬ, ಕೊನೆಗೆ ಕಿಡ್ನಿ ಮಾರಲು ಹೋಗಿ 86 ಲಕ್ಷ ಕಳೆದುಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ರಾಜಾಜಿ ನಗರದ 38 ವರ್ಷದ ವ್ಯಕ್ತಿ ಹಣ ಕಳೆದು ಕೊಂಡಿದ್ದು, ಕಿಡ್ನಿ ಖರೀದಿಸುವ ನೆಪದಲ್ಲಿ ಅಭಿಜಿತ್ ಎಂಬಾತ ಟೋಪಿ ಹಾಕಿದ್ದಾನೆ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಣಕಾಸು ಸಮಸ್ಯೆಗೆ ತುತ್ತಾಗಿದ್ದ ಸಂತ್ರಸ್ತರಿಗೆ ಗೂಗಲ್ನಲ್ಲಿ ಅಭಿಜಿತ್ ಎಂಬಾತನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಚಾಟಿಂಗ್ ನಡೆದಿದೆ. ಈ ಸ್ನೇಹದಲ್ಲಿ ಸಂತ್ರಸ್ತರು, ತಮ್ಮ ಹಣಕಾಸು ಪರಿಸ್ಥಿತಿ ಬಗ್ಗೆ ಅಲವತ್ತುಕೊಂಡಿದ್ದಾರೆ. ಆಗ ಆರೋಪಿ, ‘ನೀವು ಕಿಡ್ನಿ ಮಾರಾಟ ಮಾಡಿದರೆ ಕೈ ತುಂಬಾ ಹಣ ಸಿಗಲಿದೆ. ನಿಮ್ಮ ಆರ್ಥಿಕ ಸಂಕಷ್ಟವು ನಿವಾರಣೆಯಾಗಲಿದೆ’ ಎಂದಿದ್ದಾನೆ. ಈ ಮಾತಿಗೆ ದೂರುದಾರರು ಒಪ್ಪಿಕೊಂಡಿದ್ದಾರೆ.
ಬಳಿಕ ‘ನನಗೆ ಪರಿಚಯವಿರುವ ವೈದ್ಯರುದೆಹಲಿಯಲ್ಲಿದ್ದಾರೆ. ಅವರಿಗೆ ಕಿಡ್ನಿ ದಾನ ಮಾಡಲು ಡೆಪಾಸಿಟ್, ಎಲ್ಐಸಿ ಪಾಲಿಸಿ ಮತ್ತು ವಿಮಾನದಲ್ಲಿ ಹೋಗಲು ಶುಲ್ಕ ಪಾವತಿಸಬೇಕು. ಅಲ್ಲದೆ ಕಿಡ್ನಿ ಮಾರಾಟದಿಂದ ಬರುವ ಹಣಕ್ಕೆ ತೆರಿಗೆ ಪಾವತಿಸಬೇಕು’ ಎಂದು ಸುಳ್ಳು ಹೇಳಿ ಹಂತ ಹಂತವಾಗಿ ಸಂತ್ರಸ್ತನಿಂದ ತನ್ನ ಬ್ಯಾಂಕ್ ಖಾತೆಗೆ 86 ಲಕ್ಷವನ್ನು ಆರೋಪಿ ವರ್ಗಾಯಿಸಿಕೊಂಡಿದ್ದಾನೆ. ಇದಾದ ಬಳಿಕ ಮತ್ತೆ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗ ಸಂತ್ರಸ್ತ ವ್ಯಕ್ತಿಗೆ ಗುಮಾನಿ ಬಂದಿದೆ. ಕೂಡಲೇ ತನ್ನ ಹಣ ಮರಳಿಸುವಂತೆ ಅವರು ಕೇಳಿದ್ದಾರೆ. ಇದಾದ ಬಳಿಕ ಆತನ ಸಂಪರ್ಕ ಕಡಿತವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.