ಅಗ್ರಿ ಗೋಲ್ಡ್ ಕಂಪನಿ ಹೂಡಿಕೆದಾರರಿಗೆ ಕೋಟ್ಯಂತರ ರೂ.ವಂಚನೆ ಪ್ರಕರಣ: ತಪ್ಪು ಮಾಹಿತಿ ನೀಡಿದ ಎಸಿಗೆ ಹೈಕೋರ್ಟ್ ಸಮನ್ಸ್

ಬೆಂಗಳೂರು

ಬೆಂಗಳೂರು: ಅಗ್ರಿ ಗೋಲ್ಡ್ ಕಂಪನಿ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ, ಬೇರೆ ಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಂದೇ ಕಡೆಗೆ ವರ್ಗಾಯಿಸುವ ಸಂಬಂಧ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಯೇ ಇಲ್ಲ. ಕಳೆದ ಆರೇಳು ತಿಂಗಳಿನಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದ ಸರ್ಕಾರ ಶುಕ್ರವಾರ ಉಲ್ಟಾ ಹೊಡೆದಿದ್ದು, ರಾಮನಗರ ಎಸಿ ತಪ್ಪು ಮಾಹಿತಿಯಿಂದಾಗಿ ಅರ್ಜಿ ಸಲ್ಲಿಸಲಾಗಿತ್ತೆಂದು ಸರ್ಕಾರಿ ವಕೀಲರೇ ಹೈಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಬಗ್ಗೆ ವಿವರಣೆ ನೀಡಲು ರಾಮನಗರ ಉಪ ವಿಭಾಗಾಧಿಕಾರಿ ಮಾರ್ಚ್ 10ಕ್ಕೆ ಖುದ್ದು ಹಾಜರಾಗಬೇಕು ಎಂದು ಆದೇಶಿಸಿ ಸಮನ್ಸ್ ನೀಡಿದೆ. ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟ್‌ರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ರಾಮನಗರ ಎಸಿಗೆ ಸಮನ್ಸ್ ನೀಡಿದೆ.

Leave a Reply

Your email address will not be published.