ಜೋಡೆತ್ತುಗಳಂತೆ ಇದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಸಂಬಂಧ ದಿಢೀರ್ ಹಳಸಿಕೊಂಡಿದ್ದೇಕೆ. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರು ಜೆಡಿಎಸ್ ಹಾಗೂ ಜೆಡಿಎಸ್ ನಾಯಕರ ಬಗ್ಗೆ ಆಡಿದ ಆ ಒಂದು ಮಾತು ಸ್ನೇಹಿತರಲ್ಲಿ ಒಡಕಿಗೆ ಕಾರಣವಾಯ್ತಾ.. ಹೌದು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಓಡಾಡುವಾಗ ಡಿ.ಕೆ.ಸುರೇಶ್ ಒಂದು ಹೇಳಿಕೆ ನೀಡಿ ಬಿಟ್ಟಿದ್ದರು.
ಮುಂದೆ ನಿಮ್ಮ ಕೈಗೆ ಸಿಗುವ ಎಂಎಲ್ ಎ ಯನ್ನೇ ಕೊಡುತ್ತೇನೆ ಎಂದು ಹೇಳಿದ್ದರು. ಅವರು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಚನ್ನಪಟ್ಟಣ ಶಾಸಕ ಹೆಚ್.ಡಿ.ಕುಮಾರಸ್ವಾಮಿಯವರನ್ನೇ ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡಿದ್ದರಾ.. ಆದರೆ, ಈ ಮಾತೇ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕೆರಳಿಸಿತ್ತು. ಇದರಿಂದಾಗಿಯೇ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ದ ತಿರುಗಿ ಬಿದ್ದಿದ್ರು. ಹೇಳಿಕಾ ಸಮರವನ್ನು ಶುರು ಮಾಡಿದ್ದರು. ಇದರ ಜತೆಗೆ ಕಳೆದ ತಿಂಗಳು ರಾಮನಗರದಲ್ಲಿ ಜೆಡಿಎಸ್ ನ 2 ತಾಲೂಕು ಪಂಚಾಯ್ತಿ ಸದಸ್ಯರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು, ತಾಲೂಕು ಪಂಚಾಯ್ತಿ ಅಧಿಕಾರ ಕಾಂಗ್ರೆಸ್ ಗೆ ಸಿಗುವಂತೆ ಮಾಡಿದ್ದರು.
ಆದರೆ, ಈ ಮೊದಲು ರಾಮನಗರ ತಾಲೂಕು ಪಂಚಾಯ್ತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿಯಾಗಿ ಅಧಿಕಾರ ಹಂಚಿಕೊಳ್ಳಲಾಗಿತ್ತು. ಒಪ್ಪಂದದ ಪ್ರಕಾರ, ಈಗ ಜೆಡಿಎಸ್ ಗೆ ಅಧಿಕಾರ ಬಿಟ್ಟುಕೊಡಬೇಕಾಗಿತ್ತು. ಆದರೆ, ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ನಾಯಕರು, ಜೆಡಿಎಸ್ ಸದಸ್ಯರನ್ನು ಸೆಳೆದುಕೊಂಡು ವಿಶ್ವಾಸ ದ್ರೋಹ ಮಾಡಿದ್ದರು. ಇದು ಹೆಚ್.ಡಿ.ಕುಮಾರಸ್ವಾಮಿಯವರನ್ನು ಕೆರಳಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ.. ದಿನೇ ದಿನೇ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಭಾವಿಯಾಗತೊಡಗಿದೆ. ಸ್ವತಃ ಡಿ.ಕೆ.ಶಿವಕುಮಾರ್ ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಕ್ರಮೇಣ ಒಕ್ಕಲಿಗ ನಾಯಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ.
ಈಗ ಜೆಡಿಎಸ್ ನ ಓಟ್ ಬ್ಯಾಂಕ್ ಆಗಿರುವ ಒಕ್ಕಲಿಗರನ್ನು ತಮ್ಮತ್ತ ಸೆಳೆಯಲು ಡಿ.ಕೆ.ಸಹೋದರರು ಪ್ರಯತ್ನಿಸುತ್ತಿದ್ದಾರೆ ಎಂಬುದು ಹೆಚ್.ಡಿ.ಕುಮಾರಸ್ವಾಮಿಯವರ ಅನುಮಾನ. ಹಾಗಾಗಿಯೇ, ಕುಮಾರಸ್ವಾಮಿ ಡಿ.ಕೆ. ಸಹೋದರರ ವಿರುದ್ದ ತಿರುಗಿಬಿದ್ದಿದ್ದಾರೆ. ಜೋಡೆತ್ತುಗಳು ಒಂಟೆತ್ತುಗಳಾಗಿವೆ.