ಕಾರ್ಮಿಕ ಕಲ್ಯಾಣ ಮಂಡಳಿಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

ಜಿಲ್ಲೆ

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕರ್ನಾಟಕ ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಜೆಟ್ ಅಧಿವೇಶನದ ಮೂರನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 25 ಸಾವಿರ ಜನ ನೋಂದಾಯಿತ ಕಾರ್ಮಿಕರಿದ್ದಾರೆ.

ಮಂಡಳಿಯ ಕಾರ್ಮಿಕರ ಮತ್ತು ಮಾಲಿಕರ ಸಂಗ್ರಹದ ವಂತಿಕೆ 23 ಕೋಟಿ ಮತ್ತು ಸರ್ಕಾರದ ವಂತಿಕೆ ಐದು ಕೋಟಿ ಸೇರಿ ಒಟ್ಟು 28 ಕೋಟಿ ರೂ. ಪ್ರತಿ ವರ್ಷದ ವಂತಿಕೆಯಾಗಿದೆ. ಮೂರು ವರ್ಷದ ವಂತಿಕೆ 193 ಕೋಟಿ ರೂ. ಆಗಿದೆ ಎಂದು ಸರ್ಕಾರ ಉತ್ತರದಲ್ಲಿ ತಿಳಿಸಿದೆ ಎಂದರು. ವಂತಿಕೆಯಲ್ಲಿನ 135 ಕೋಟಿ ರೂ. ಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಮಾಡಿದ್ದಾರೆ. ಮಂಡಳಿಯ ವ್ಯಾಪ್ತಿಯಲ್ಲಿ ಅನೇಕ ಯೋಜನೆಗಳಿವೆ ಎಂಬ ದೊಡ್ಡ ಪಟ್ಟಿಯನ್ನು ಉತ್ತರದಲ್ಲಿ ನೀಡಿದ್ದಾರೆ. ಅವುಗಳಲ್ಲಿ ಶೈಕ್ಷಣಿಕ ಪ್ರೋತ್ಸಾಹ ಧನ, ವೈದ್ಯಕೀಯ ನೆರವು, ಮೃತ ಕಾರ್ಮಿಕ ಅಂತ್ಯಸಂಸ್ಕಾರಕ್ಕೆ ನೆರವು, ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ಸೇರಿದಂತೆ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೇ ರಾಜ್ಯದಲ್ಲಿ ಕಳೆದ ವರ್ಷಗಳಲ್ಲಿ ಕೇವಲ 13 ಸಾವಿರ ಜನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, 07 ಜನರಿಗೆ ವೈದ್ಯಕೀಯ, 387 ಮೃತರ ಕುಟುಂಬಗಳಿಗೆ ಆರ್ಥಿಕ, ಅಪಘಾತದಲ್ಲಿ ಮೃತಪಟ್ಟ 03 ಜನರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಿದ್ದಾರೆ. ಅಂಗವಿಕಲರಿಗೆ ಯಾವುದೇ ಸೌಲಭ್ಯ ನೀಡಿಲ್ಲ. ವೈದ್ಯಕೀಯ ತಪಾಸಣಾ ಶಿಬಿರ ನಡೆಸಲು 60 ಸಾವಿರ ರೂ. ಮಾತ್ರ ಖರ್ಚು ಮಾಡಿದ್ದಾರೆ. ಒಟ್ಟು 6 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿನ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಎಷ್ಟು ಜನ ನೋಂದಣಿಯಾಗಿದ್ದಾರೆ ಎಂಬುದನ್ನು ಸರ್ಕಾರ ತಿಳಿಸಬೇಕೆಂದು ಶಾಸಕರು ಆಗ್ರಹಿಸಿದರು.

ಈ ವೇಳೆ ಉತ್ತರ ನೀಡಿದ ಕಾರ್ಮಿಕ ಸಚಿವ ಅರಬೈಲ್ ಹೆಬ್ಬಾರ್ ಶಿವರಾಮ್ ರವರು, ಶಾಸಕರು ಕಲ್ಯಾಣ ಮಂಡಳಿಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಅನೇಕ ಮಂಡಳಿಗಳಿವೆ. ಕಲ್ಯಾಣ ಮಂಡಳಿಯಲ್ಲಿ ಅಪಘಾತ, ವೈದ್ಯಕೀಯ ತಪಾಸಣೆ, ಕ್ರೀಡಾಕೂಟ ಸೇರಿದಂತೆ ವಿವಿಧ ರೀತಿಯ ನೆರವು ಯೋಜನೆಗಳ ನೆರವಿನ ಮೊತ್ತವನ್ನು ನಮ್ಮ ಸರ್ಕಾರ ಬಂದ ಮೇಲೆ ಹೆಚ್ಚಿಗೆ ಮಾಡಿದ್ದೇವೆ ಎಂದರು.ಇದೇ ವೇಳೆ ಮರುಪ್ರಶ್ನೆ ಕೇಳಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಸಚಿವರು ನೀಡಿದ ಉತ್ತರ ಸರಿಯಿದೆ. ಆದರೇ, ಕೇವಲ ಏಳು ಜನರಿಗೆ ಮಾತ್ರ ವೈದ್ಯಕೀಯ ನೆರವು ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಇಎಸ್ಐ ಮೂಲಕ ನಿರ್ವಾಹಣೆ ಮಾಡ್ತಿದ್ದಾರೆ. ಆದರೇ ಇಲ್ಲಿ ವಂತಿಕೆಯಿಂದ ಸಂಗ್ರಹವಾದ 135 ಕೋಟಿ ರೂ. ಹಣವನ್ನು ಬ್ಯಾಂಕ್ ಗಳಲ್ಲಿ ಠೇವಣಿ ಮಾಡಿದ್ದಾರೆ.

ಮಂಡಳಿಯಿಂದ ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆ ವ್ಯವಸ್ಥೆಯಿಲ್ಲ. ಕೇಂದ್ರ ಸರ್ಕಾರದ ಇಎಸ್ಐ ನಲ್ಲಿ ಆಸ್ಪತ್ರೆಗಳಿವೆ. ಮಂಡಳಿಯಿಂದ ಆಸ್ಪತ್ರೆ ಸೇವೆ ಸೇರಿದಂತೆ ಇನ್ನೂ ಹೆಚ್ಚಿನ ಸೇವೆಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಮಂಡಳಿಯಲ್ಲಿ ಕಾರ್ಮಿಕರ ನೋಂದಣಿ ಎಷ್ಟಿದೆ. ನೊಂದಣಿ ಯಾಕೆ ಹೆಚ್ಚಾಗಿಲ್ಲ. ಹೆಚ್ಚಿನ ಹಣವನ್ನು ಖರ್ಚು ಮಾಡುವುದಕ್ಕೆ ಸಮಸ್ಯೆ ಏನು ಎಂಬುದು ಶಾಸಕರ ಪ್ರಶ್ನೆಯಾಗಿದೆ ಎಂದರು. ನಮ್ಮಲ್ಲಿ ಬಂದಿರೋ ಅರ್ಜಿಗಳಿಗೆ ಪರಿಹಾರ ಒದಗಿಸಿಕೊಡುವ ಕೆಲಸ ನಾವು ಮಾಡುತ್ತಿದ್ದೇವೆ. ಈ ವಿಷಯದಲ್ಲಿ ಶಾಸಕರ ಸಲಹೆಗಳು ಏನಿವೆ ಎಂದು ತಿಳಿದುಕೊಂಡು ಅವರ ಸಲಹೆಗಳನ್ನು ತೆಗೆದುಕೊಂಡು ಕ್ರಮಕೈಗೊಳ್ಳುತ್ತೇವೆಂದು ಸಚಿವರು ತಿಳಿಸಿದರು.

Leave a Reply

Your email address will not be published.