ರಾಮನಗರ: ಕನಕಪುರ ತಾಲೂಕಿನ ಕಾವೇರಿ ವನ್ಯಜೀವಿ ವಿಭಾಗದ ಮೂಗ್ಗೂರು ಅರಣ್ಯ ಪ್ರದೇಶ ವ್ಯಾಪ್ತಿಯ ಆಲಕುಳಿ ಗ್ರಾಮದ ಬಳಿಯ ಹೊಸ ಬಾವಿ ಹಳ್ಳದಲ್ಲಿ ಚೆಕ್ ಡ್ಯಾಮ್ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದು ನೀರನ್ನು ಕುಡಿದ 1 ಜಿಂಕೆ ಮತ್ತು 4 ಹಸು ಗಳು ಸಾವನ್ನಪ್ಪಿವೆ.
ಕಳ್ಳ ಬೇಟೆಗಾರರು ಬಂದೂಕು ಬಳಸುವ ಬದಲು ನೀರಿನಲ್ಲಿ ಯೂರಿಯಾ ಬೆರೆಸಿ ಆ ನೀರನ್ನು ಕುಡಿದ ಪ್ರಾಣಿಗಳು ಸ್ಥಳದಲ್ಲೇ ಮೃತಪಟ್ಟ ನಂತರ ಸುಲಭವಾಗಿ ಬೇಟೆಯಾಡಿ ಮಾಂಸವನ್ನು ಮಾರಾಟ ಮಾಡುವ ಮೂಲಕ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನರೇಗಾ ಯೋಜನೆಯಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ಚೆಕ್ ಡ್ಯಾಮ್ ನಿರ್ಮಾಣ ಮಾಡಿದ್ದು ಇದರಿಂದ ಕಾಡು ಪ್ರಾಣಿಗಳ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ ಆಗಿದೆ.ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಧೋರಣೆ ಇದಕ್ಕೆ ಕಾರಣವಾಗಿದೆ,ಅರಣ್ಯ ಇಲಾಖೆ ಅಧಿಕಾರಿಗಳು ಚೆಕ್ ಡ್ಯಾಮ್ ನಲ್ಲಿರುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ ನೀರಿನಲ್ಲಿ ಯಾವ ವಿಷವನ್ನು ಬೆರೆಸಿದ್ದಾರೆ ಎಂದು ಧೃಡಪಡಿಸಬೇಕು ಎಂದ ಮೃತಪಟ್ಟ ಹಸುಗಳ ಮಾಲೀಕರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಕಾಲ ಕ್ರಮೇಣ ಕಾಡು ಪ್ರಾಣಿಗಳು ಪಕ್ಷಿಗಳಿಗೆ ಅಪಾಯ ತಪ್ಪಿದ್ದಲ್ಲ.