ವರ್ಜಿನ್ನಾ, ಇಲ್ಲವಾ ನಿರೂಪಿಸು ಎಂದ ಗಂಡ: ಅತ್ತೆ ಮುಂದೆ ನಗ್ನವಾಗಿ ನಿಂತ ಸೊಸೆ

ಅಪರಾಧ

ಭೋಪಾಲ್: ಅತ್ತೆಯೊಬ್ಬಳು ಹನಿಮೂನ್‍ಗೆ ಹೋಗುವ ಮುನ್ನ ತನ್ನ ಸೊಸೆಯ ಕನ್ಯತ್ವ ಪರೀಕ್ಷೆ ಮಾಡಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಇದೀಗ ಪತ್ನಿ ಈ ಕುರಿತು ಪೊಲೀಸರು ದೂರು ನೀಡಿದ್ದು, ಪೊಲೀಸರು ಅತ್ತೆ, ಪತಿ ಮತ್ತು ಪತಿಯ ಸಹೋದರನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಧ್ಯ ಪ್ರದೇಶದ ಇಂದೋರ್ ನಿವಾಸಿ ಯುವತಿಯ ವಿವಾಹ ಸ್ಥಳೀಯ ಯುವಕನೊಂದಿಗೆ ನಡೆದಿತ್ತು. ವಿವಾಹದ ನಂತರ ತನ್ನ ಪತಿಯೊಂದಿಗೆ ಹನಿಮೂನ್‍ಗೆ ಹೋಗಲು ಯುವತಿ ಪ್ಲಾನ್ ಮಾಡಿಕೊಂಡಿದ್ದಳು.

ಆದರೆ ಅತ್ತೆ ಮದುವೆಯಾದ 2 ದಿನಗಳ ಬಳಿಕ ಸೊಸೆಯನ್ನು ಬಾತ್‍ರೂಮಿಗೆ ಬರುವಂತೆ ಹೇಳಿ ಅಲ್ಲಿ ಬಟ್ಟೆಯನ್ನು ಬಿಚ್ಚುವಂತೆ ಹೇಳಿದ್ದಳು. ಇದರಿಂದ ಶಾಕ್‍ಗೆ ಒಳಗಾದ ಆಕೆ ತನ್ನ ಪತಿಗೆ ವಿಚಾರ ತಿಳಿಸಿದ್ದಳು. ಆದರೆ ಪತ್ನಿಯ ಮಾತಿಗೆ ಮರು ಉತ್ತರ ನೀಡಿದ ಆತ ಅಮ್ಮ ಹೇಳಿದಂತೆ ಮಾಡು ಎಂದು ಸೂಚಿಸಿದ್ದ. ಅಲ್ಲದೇ ನೀನು ವರ್ಜಿನ್ನಾ ಇಲ್ಲವಾ ಎಂದು ನಿರೂಪಿಸು ಎಂದಿದ್ದ. ಪತಿಯ ಮಾತಿನಿಂದ ಬೇಸರಗೊಂಡ ಆಕೆ ಇಷ್ಟವಿಲ್ಲದಿದ್ದರೂ ಅತ್ತೆಯ ಎದುರು ಬೆತ್ತಲಾಗಿ ನಿಂತುಕೊಂಡಿದ್ದಾಳೆ.

ಆ ಬಳಿಕ ಪತಿ-ಪತ್ನಿ ಇಬ್ಬರೂ ಹನಿಮೂನ್‍ಗೆ ಹೋಗಿದ್ದರು. ಆದರೆ ನಾಲ್ಕು ತಿಂಗಳ ಕಳೆದ ಬಳಿಕ ಪತಿಯ ಸಹೋದರ ಆಕೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಈ ಸಂಗತಿ ತಿಳಿದರೂ ಅತ್ತೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅಲ್ಲದೇ ತನ್ನ ಹಿರಿಯ ಮಗನ ರೂಮ್ ಸ್ವಚ್ಛ ಮಾಡುವಂತೆ ಹೇಳಿ ಆತನ ರೂಮಿಗೆ ಸೊಸೆಯನ್ನು ಕಳುಹಿಸಿದ್ದಳು. ಸೊಸೆ ರೂಮಿಗೆ ಹೋಗುತ್ತಿದ್ದಂತೆ ಪತಿಯ ಸಹೋದರ ಬಾಗಿಲನ್ನು ಮುಚ್ಚಿ ಅತ್ಯಾಚಾರ ಎಸಗಿದ್ದ.

ಸಂತ್ರಸ್ತೆಯ ನಡೆದ ಘಟನೆಯ ಬಗ್ಗೆ ಅತ್ತೆಯ ಬಳಿ ಹೇಳಿದ್ದಳು. ಆಗ ಅತ್ತೆ ಆಕೆಯನ್ನೇ ಬೈದಿದ್ದಳು. ಕೊನೆಗೆ ಕುಟುಂಬಸ್ಥರ ಕಿರುಕುಳ ಸಹಿಸಲಾಗದೆ ಆಕೆ ತವರಿಗೆ ತೆರಳಿದ್ದಳು. ಆದರೆ ಪೋಷಕರಿಗೆ ನಡೆದ ಘಟನೆಯ ಬಗ್ಗೆ ಹೇಳಲು ಮುಜುಗರ ಪಟ್ಟು ಸುಮ್ಮನಾಗಿದ್ದಳು. ಕೆಲ ದಿನಗಳ ಬಳಿಕ ಪೋಷಕರು ಅತ್ತೆ ಮನೆಗೆ ಹೋಗುವಂತೆ ಹೇಳಿದ ಸಂದರ್ಭದಲ್ಲಿ ಅನಿವಾರ್ಯವಾಗಿ ಆಕೆ ನಡೆದ ಘಟನೆಗಳನ್ನು ಪೋಷಕರಿಗೆ ವಿವರಿಸಿದ್ದಳು. ಸದ್ಯ ಪೋಷಕರು ಮಗಳನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಕುರಿತು ಪತಿ,  ಅತ್ತೆ  ಮತ್ತು ಪತಿಯ ಸಹೋದರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published.