
ಬೆಂಗಳೂರಿನ ಯುವತಿಯನ್ನು ವರಿಸಿದ್ದ ಐವರಿಕೋಸ್ಟ್ ಪ್ರಜೆ: ಮದುವೆ ಹಿಂದಿತ್ತು ಮಾದಕ ವ್ಯಸನಿಯ ಮಾಸ್ಟರ್ ಪ್ಲ್ಯಾನ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾದಕ ಸರಬರಾಜು ದಂಧೆ ನಡೆಸುವುದಕ್ಕೆ ಅನುಕೂಲವಾಗಲಿ ಎಂದು ನಗರದ ಯುವತಿ ಯನ್ನೇ ಮದುವೆಯಾಗಿ ಅಕ್ರಮ ದಂಧೆಯಲ್ಲಿ ತೊಡಗಿದ್ದ ಆರೋಪಿಯನ್ನ ಸಿದ್ಧಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಯುವತಿಯೊಬ್ಬಳನ್ನ ಪ್ರೀತಿಸಿ ವಿವಾಹವಾಗಿ ಭೈರಸಂದ್ರದಲ್ಲಿ ವಾಸ್ತವ್ಯ ಹೂಡಿದ್ದ ಆರೋಪಿ, ವಿದೇಶದಿಂದ ಡ್ರಗ್ಸ್ ತಂದು ರಾಜಾರೋಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾರಂಭಿಸಿದ್ದ. ಮಾರ್ಚ್ 4ರಂದು ಭೈರಸಂದ್ರ ವಾಟರ್ ಟ್ಯಾಂಕ್ ಬಳಿ ಮಾದಕ ಮಾತ್ರೆಗಳ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನ ಸಿದ್ಧಾಪುರ ಠಾಣಾ ಪೊಲೀಸರು ಬಂಧಿಸಿದ್ದು, 10.7ಗ್ರಾಂ ತೂಕದ ಮಾತ್ರೆಗಳು, ಒಂದು ಬೈಕ್, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿ ಕಳೆದ ವರ್ಷವೂ ಮಾದಕ ಸರಬರಾಜು, ವಿದೇಶಿ ಕಾಯ್ದೆ ಉಲ್ಲಂಘನೆ ಆರೋಪದಡಿ ರಾಮಮೂರ್ತಿ ನಗರ ಠಾಣಾ ಪೊಲೀಸರಿಂದ ಬಂಧಿತನಾಗಿರುವುದು ತಿಳಿದುಬಂದಿದೆ. ಸದ್ಯ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.