
ಉಕ್ರೇನ್ ಗೆ 8.7 ಮಿಲಿಯನ್ ಡಾಲರ್ ದೇಣಿಗೆ ನೀಡಿದ ಜಪಾನಿನ ಬಿಲಿಯನೇರ್ ಹಿರೋಶಿ ಮಿಕಿತಾನಿ..!
ಟೋಕಿಯೋ : ಜಪಾನ್ ದೇಶದ ಕೋಟ್ಯಧಿಪತಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಹಿರೋಶಿ “ಮಿಕಿ” ಮಿಕಿತಾನಿ ಉಕ್ರೇನ್ ಸರ್ಕಾರಕ್ಕೆ 8.7 ಮಿಲಿಯನ್ ಅಮೇರಿಕನ್ ಡಾಲರ್ (ಅಂದಾಜು 65 ಕೋಟಿ ರೂಪಾಯಿ) ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದೇ ವೇಳೆ ರಷ್ಯಾದ ಆಕ್ರಮಣವನ್ನು ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ಸವಾಲು ಎಂದು ಅವರು ಟೀಕೆ ಮಾಡಿದ್ದಾರೆ. ಇ-ಕಾಮರ್ಸ್ ದೈತ್ಯ ರಕುಟೆನ್ನ ಸಂಸ್ಥಾಪಕ ಮಿಕಿತಾನಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಈ ಕುರಿತಾಗಿ ಪತ್ರವನ್ನೂ ಬರೆದಿದ್ದು, “ಹಿಂಸಾಚಾರಕ್ಕೆ ಬಲಿಯಾದ ಜನರಿಗೆ ಸಹಾಯ ಮಾಡಲು ಮಾನವೀಯ ಚಟುವಟಿಕೆಗಳಿಗೆ ಸಹಾಯ ಮಾಡುವ ಸಲುವಾಗಿ 1 ಬಿಲಿಯನ್ ಯೆನ್ (8.7 ಮಿಲಿಯನ್ ಅಮೇರಿಕನ್ ಡಾಲರ್) ಮೊತ್ತವನ್ನು ದೇಣಿಗೆಯಾಗಿ ನೀಡಿದ್ದೇನೆ’ ಎಂದು ಹೇಳಿದ್ದಾರೆ.
2019ರಲ್ಲಿ ತಾವು ಉಕ್ರೇನ್ ದೇಶದ ರಾಜಧಾನಿ ಕೈವ್ ಗೆ ಭೇಟಿ ನೀಡಿದ್ದೆ ಈ ವೇಳೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದೆ ಎಂದೂ ನೆನಪಿಸಿಕೊಂಡಿದ್ದಾರೆ. “ನನ್ನೆಲ್ಲಾ ಪ್ರಾರ್ಥನೆಗಳು ಉಕ್ರೇನ್ ದೇಶದ ಜನರ ಕುರಿತಾಗಿ ಇರಲಿದೆ ‘ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ. ಶಾಂತಿಯುತ ದೇಶ ಹಾಗೂ ಪ್ರಜಾಸತಾತ್ಮಕ ರಾಷ್ಟ್ರವಾಗಿರುವ ಉಕ್ರೇನ್ ಅನ್ನು ನ್ಯಾಯಸಮ್ಮ ತವಲ್ಲದ ಬಲದಿಂದ ತುಳಿಯುವುದು ಪ್ರಜಾಪ್ರಭುತ್ವಕ್ಕೆ ಎದುರಾದ ದೊಡ್ಡ ಸವಾಲೆಂದು ನಾನು ನಂಬುತ್ತೇನೆ ಎಂದು ಮಿಕಿತಾನಿ ಪತ್ರದಲ್ಲಿ ಬರೆದಿದ್ದಾರೆ. “ರಷ್ಯಾ ಮತ್ತು ಉಕ್ರೇನ್ ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಸಿಕೊಳ್ಳಬಹುದು ಮತ್ತು ಉಕ್ರೇನ್ ಜನರು ಆದಷ್ಟು ಬೇಗ ಮತ್ತೆ ಶಾಂತಿಯ ನಿರಾಳತೆಯನ್ನು ಹೊಂದಬಹುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.