
ಜುಲೈ 10 ರಂದು ಬಕ್ರೀದ್ ಹಬ್ಬದ ಹಿನ್ನೆಲೆ -ಬೆಂಗಳೂರಿನಲ್ಲಿ ಕುರಿ, ಮೇಕೆಯ ಭರ್ಜರಿ ಮಾರಾಟ
ಬಕ್ರೀದ್ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ಕುರಿ, ಮೇಕೆ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಚಾಮರಾಜಪೇಟೆ ಪೇಟೆ, ಫ್ರೇಜರ್ ಟೌನ್, ಶಿವಾಜಿನಗರ, HBR ಲೇಔಟ್ ಭಾಗದಲ್ಲಿ ಕುರಿ ವ್ಯಾಪಾರ ಜೋರಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ವ್ಯಾಪಾರ ಇಳಿಮುಖವಾಗಿತ್ತು. ಈ ಬಾರಿ ಯಾವುದೇ ಕೊರೊನಾ ಕಠಿಣ ನಿಯಮಗಳಿಲ್ಲದ ಕಾರಣ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೊರೊನಾ ಹೊಡೆತದಿಂದ ಎರಡು ವರ್ಷ ವ್ಯಾಪಾರ ಇರಲಿಲ್ಲ. ಈ ವರ್ಷ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ. ರಾಜ್ಯದ ಹಲವು ಭಾಗಗಳಿಂದ ಹಲವು ತಳಿಗಳ ಕುರಿಗಳು ನಗರಕ್ಕೆ ಮಾರಾಟಕ್ಕೆ ಆಗಮಿಸಿವೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ್ ನಿಂದಲೂ ಹಲವು ತಳಿಗಳ ಕುರಿಗಳು ಬಂದಿದ್ದು, ಒಂದರ ಬೆಲೆ 17 ಸಾವಿರ ರೂ.ಗಳಿಂದ 80 ಸಾವಿರ ರೂ.ಗಳಷ್ಟಿದೆ. ಇನ್ನೂ ಬನ್ನೂರು, ಅಮಿನ್ಘಢ್, ಮಳವಳ್ಳಿ, ಗುಜರಾತ್, ಮಹಾರಾಷ್ಟ್ರ ಕುರಿಗಳಿಗೆ ಭಾರೀ ಬೇಡಿಕೆ ಬಂದಿದೆ. ಗುಜರಾತ್ ತಳಿಯ ಕುರಿಗಳು ಬರೋಬ್ಬರಿ 80 ಸಾವಿರ ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿವೆ. ಹಬ್ಬಕ್ಕೆ ನಾಲ್ಕು ದಿನ ಬಾಕಿ ಇರುವಂತೆ ಕುರಿ ಮೇಕೆ ಕೊಳ್ಳಲು ಜನರು ಮುಂದಾಗುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತಿನ ರೈತರು ಕುರಿ, ಮೇಕೆಗಳ ಆಹಾರದ ಜೊತೆ ಆಗಮಿಸುತ್ತಿದ್ದಾರೆ.