ಕಾಫಿನಾಡು ಚಂದುಗಿಲ್ಲ ದೊಡ್ಮನೆ ಎಂಟ್ರಿ ಅವಕಾಶ: ಅಸಮಾಧಾನ ಹೊರ ಹಾಕಿದ ಅಭಿಮಾನಿಗಳು

ಚಲನಚಿತ್ರ

ನಾನು ಪುನೀತ್ ರಾಜ್ ಕುಮಾರ್ ಹಾಗೂ ಶಿವಣ್ಣನ ಅಭಿಮಾನಿ ಎಂದು ಹೇಳುತ್ತ ಬರ್ತಡೇ ವಿಶ್ ಮಾಡುತ್ತಿದ್ದ ಕಾಫಿ ನಾಡು ಚಂದು ಬಿಗ್ ಬಾಸ್ ಬರ್ಬೇಕು ಅನ್ನೋದು ಸಾಕಷ್ಟು ಮಂದಿಯ ಬಯಕೆಯಾಗಿತ್ತು. ಆದರೆ 16 ಸ್ಪರ್ಧಿಗಳಲ್ಲಿ ಕಾಫಿ ನಾಡು ಚಂದು ಕಾಣಿಸಿಕೊಳ್ಳದೆ ಇರೋದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಹಾಡು ಹಾಗೂ ಡ್ಯಾನ್ಸ್​ ಮೂಲಕ ಎಲ್ಲರನ್ನು ರಂಜಿಸುತ್ತಿರುವ ಕಾಫಿನಾಡು ಚಂದು ಈ ಬಾರಿ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲೂ ಚಂದು ಹೆಸರು ಕೂಡ ರಾರಾಜಿಸಿತ್ತು. ಅತ್ತ ಕಡೆ ಅವಕಾಶ ನೀಡಿದರೆ ನಾನು ಸಹ ಬಿಗ್ ಬಾಸ್​ಗೆ ಹೋಗುತ್ತೇನೆ ಎಂದು ಕಾಫಿನಾಡು ಚಂದು ಕೂಡ ಹೇಳಿಕೊಂಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಚಂದು ಕಾಣಿಸಿಕೊಳ್ತಾರೆ ಅಂತಲೆ ಸಾಕಷ್ಟು ಮಂದಿ ಅಂದುಕೊಂಡಿದ್ದರು.

ಆದರೆ ಆಗಸ್ಟ್ 6ರಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಬರ ಮಾಡಿಕೊಂಡರು. ಹೀಗೆ 16 ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟರೂ ಕಾಫಿನಾಡು ಚಂದು ಮಾತ್ರ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ಇದೀಗ ಕಾಫಿನಾಡು ಚಂದುವಿಗೆ ಯಾಕೆ ಅವಕಾಶ ನೀಡಲಾಗಿಲ್ಲ ಎಂಬ ಪ್ರಶ್ನೆಗಳನ್ನು ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಅತ್ಯುತ್ತಮ ಮನರಂಜನೆ ನೀಡುತ್ತಿರುವ ಚಂದು ಬಿಗ್​ ಬಾಸ್​ಗೆ ಸೂಕ್ತ ವ್ಯಕ್ತಿ. ಎಲ್ಲರೂ ಮನರಂಜನೆಯನ್ನು ಬಯಸಿ ಬಿಗ್ ಬಾಸ್ ನೋಡುತ್ತಾರೆ. ಇದೀಗ ಆಯ್ಕೆಯಾಗಿರುವ ಸ್ಪರ್ಧಿಗಳಿಗಿಂತ ಚಂದು ಅತ್ಯುತ್ತಮ ಎಂಟರ್ಟೈನರ್. ಹೀಗಾಗಿ ಕಾಫಿನಾಡು ಚಂದುಗೆ ಅವಕಾಶ ನೀಡಬೇಕಿತ್ತು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.