ಕನ್ನಡ ಭಾಷೆ, ಸಾಹಿತ್ಯಕ್ಕೆ ಕನ್ನಡ ಪತ್ರಿಕೋದ್ಯಮದ ಕೊಡುಗೆ ಅಪಾರ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು

ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯಕ್ಕೆ ಕನ್ನಡ ಪತ್ರಿಕೋದ್ಯಮದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಸಂಬಂಧ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡುವುದು ಸಮಸ್ಯೆಗಳಿಗೆ ಪರಿಹಾರ. ಹೊಸ ಓದುಗರು, ಹೊಸ ವೀಕ್ಷಕರು ಮಾಧ್ಯಮಗಳಿಗೆ ಇದ್ದೇ ಇರುತ್ತಾರೆ. ನಾಡಿನ ಭವಿಷ್ಯದೊಂದಿಗೆ ಪತ್ರಿಕೋದ್ಯಮದ ಭವಿಷ್ಯ ಹಾಸುಹೊಕ್ಕಾಗಿದೆ. ನಮ್ಮ ಪಾತ್ರಗಳನ್ನು ಎಷ್ಟು ಜವಾಬ್ದಾರಿಯಿಂದ, ಸುಸಂಸ್ಕೃತವಾಗಿ ಮಾಡುತ್ತೇವೆ ಎನ್ನುವುದು ಮುಖ್ಯ. ನಾವು ಇತಿಹಾಸದ ಒಂದು ಭಾಗವಾಗಬೇಕು ಅಥವಾ ಇತಿಹಾಸವನ್ನು ಸೃಷ್ಟಿ ಮಾಡಬೇಕು. ಈ ಕೆಲಸವನ್ನು ಒಂದಾಗಿ ಮಾಡೋಣ. ನಾವು ಬೇರೆಯಲ್ಲ ಎಂದು ಹೇಳಿದ್ದಾರೆ.

ರಾಜಕಾರಣಿಗಳು ಮಾಧ್ಯಮದವರಿಗೆ ಅನಿವಾರ್ಯ. ರಾಜಕೀಯದ ಸುದ್ದಿ ಇಲ್ಲದೆ ಪತ್ರಿಕೆಗಳು ಬರುವುದಿಲ್ಲ. ರಾಜಕಾರಣಿಗಳು ಹಾಗೂ ಮಾಧ್ಯಮದವರಿಗೆ ಬಿಡಿಸಲಾರದ ನಂಟಿದೆ. ಅದು ಆರೋಗ್ಯಕರವಾಗಿದ್ದಷ್ಟೂ ಒಳ್ಳೆಯದು. ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಯಾರು ಟೀಕೆಗಳನ್ನು ಸ್ವೀಕರಿಸುವುದಿಲ್ಲವೋ ಅವರು ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಿಲ್ಲ. ಟೀಕೆಗಳಿಂದ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಹಾಗೂ ಅದರಿಂದ ಸುಧಾರಿಸಲು ಸಾಧ್ಯ. ಹೊಗಳಿಕೆಯಿಂದ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Leave a Reply

Your email address will not be published.