ಕೊಡಗು : ವಿರಾಜಪೇಟೆಯಲ್ಲಿ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರಿಬ್ಬರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 41 ಸಾವಿರ ಮೌಲ್ಯದ 1 ಕೆ.ಜಿ 182 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿರಾಜಪೇಟೆ ನಗರಕ್ಕೆ ಆಟೋ ರಿಕ್ಷಾದಲ್ಲಿ ಮಾರಾಟಕ್ಕೆ ಗಾಂಜಾವನ್ನು ತರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ಸಿಬ್ಬಂದಿಯೊಡನೆ ವಿರಾಜಪೇಟೆ ನಗರದ ಹೊರ ವಲಯದ ಕಾವೇರಿ ಕಾಲೇಜು ಬಳಿ ತಪಾಸಣೆ ಮಾಡುತ್ತಿದ್ದಾಗ ಗೋಣಿಕೊಪ್ಪ ಕಡೆಯಿಂದ ಬರುತ್ತಿದ್ದ ಆಟೋವನ್ನು ನಿಲ್ಲಿಸಿ ಆಟೋ ದಲ್ಲಿದ್ದವರನ್ನು ವಿಚಾರಿಸಲಾಗಿ ಆಟೋದಲ್ಲಿ ಗಾಂಜಾ ಇರುವುದಾಗಿ ಕಂಡು ಬಂದಿದೆ.
ಆರೋಪಿಗಳು ಮೈಸೂರಿನ ಕಲ್ಯಾಣಗಿರಿಯಲ್ಲಿ ವಾಸ ಮಾಡುವ ಡಿ.ಐ ಮುಹಮ್ಮದ್ ಇಲಿಯಾಸ್ ಅಹಮದ್, ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಜುಲ್ಲಾಖಾನ್ ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಆಟೋ ರಿಕ್ಷಾವನ್ನು ತಪಾಸಣೆ ಮಾಡಿದಾಗ 41 ಸಾವಿರ ರೂ ಬೆಲೆ ಬಾಳುವ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳ ಪತ್ತೆ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸುಮನ್ ಡಿ.ಪೆನ್ನೇಕರ್, ಐ.ಪಿ.ಎಸ್ ಹಾಗೂ ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಜಯ ಕುಮಾರ್ರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಕಾಳೇಗೌಡ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಹೆಚ್.ಎಸ್ ಬೋಜಪ್ಪ, ಪ್ರೊಬೆಷನರಿ ಪಿ.ಎಸ್.ಐ ರವರುಗಳಾದ ವಿನಯ್ ಕುಮಾರ್, ಸಿ, ಎಸ್. ಅಭಿಜಿತ್, ಎ.ಎಸ್.ಐ ಸಿ.ವಿ ಶ್ರೀಧರ್, ಸಿಬ್ಬಂದಿರುವರಾದ ಮುಸ್ತಾಫ, ಪಿ.ಯು ಮುನೀರ್, ಎನ್.ಎಸ್ ಲೋಕೇಶ್, ಗಿರೀಶ ಈರಪ್ಪ ವಠಾರ, ಚಾಲಕ ಯೋಗೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.