KRG ಸ್ಟುಡಿಯೋಗೆ ಭೇಟಿ ಕೊಟ್ಟ ರಮ್ಯಾ: ಕುತೂಹಲ ಮೂಡಿಸಿದ ಮೋಹಕ ತಾರೆ ನಡೆ

ಚಲನಚಿತ್ರ

ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಸ್ಟುಡಿಯೋಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಭೇಟಿ ನೀಡಿದ್ದು ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದೆ. ಈ ಹಿಂದೆಯೂ ಇದೇ ಕೆ.ಆರ್.ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಪಾಟ್ ಗೂ ರಮ್ಯಾ ಭೇಟಿ ಮಾಡಿದ್ದರು. ರಮ್ಯಾ ಎರಡೆರಡು ಭಾರಿ ಕೆ ಆರ್ ಜಿ ಸ್ಟುಡಿಯೋಗೆ ಭೇಟಿ ನೀಡಿರುವುದರಿಂದ ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.

ಪದೇ ಪದೇ ಕೆ.ಆರ್.ಜಿ ಸ್ಟುಡಿಯೋ ಮಾಲೀಕರನ್ನು ರಮ್ಯಾ ಭೇಟಿ ಆಗುತ್ತಿರುವುದರಿಂದ ಈ ಟೀಮ್ ಮೂಲಕವೇ ರಮ್ಯಾ ಮತ್ತೆ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಬಹುದು ಎನ್ನುವ ಸುದ್ದಿ ಗಾಂಧೀನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.

ಇದು ಪುನೀತ್ ಅವರ ಆಸೆಯೂ ಆಗಿತ್ತು. ಪುನೀತ್ ನಟಿಸಬೇಕಿದ್ದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಬೇಕಿದ್ದ ಚಿತ್ರವೊಂದಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸ್ವತಃ ಪುನೀತ್ ರಾಜ್ ಕುಮಾರ್ ಅವರ ಆಸೆಯಾಗಿತ್ತಂತೆ. ಅದನ್ನು ಹೊಂಬಾಳೆ ಈಡೇರಿಸಲಿದೆ ಎನ್ನುವುದು ಸದ್ಯದ ಹರಿದಾಡುತ್ತಿರುವ ಲೇಟೆಸ್ಟ್ ನ್ಯೂಸ್.

ನಿನ್ನೆ ಕೂಡ ರಮ್ಯಾ ಅವರು ಕೆ.ಆರ್.ಜಿ ಸ್ಟುಡಿಯೋ ಕಚೇರಿಗೆ ಭೇಟಿ  ನೀಡಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕ ಜಯಣ್ಣ, ನಿರ್ದೇಶಕ ಯೋಗಿ ಜಿ ರಾಜ್, ಪುನೀತ್ ಅವರ ಕುಟುಂಬದ ಸದಸ್ಯರಾಗಿರುವ ಚೆನ್ನ ಸೇರಿದಂತೆ ಹಲವರು ಹಾಜರಿದ್ದಾರೆ. ಈಗಾಗಲೇ ರಮ್ಯಾ ಅವರಿಗಾಗಿಯೇ ಕಥೆಯನ್ನು ಸಿದ್ಧ ಪಡಿಸುತ್ತಿದ್ದು, ಅತೀ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Leave a Reply

Your email address will not be published.