ಸಾಲ ಮರುಪಾವತಿ ವಿಸ್ತರಣೆಗೆ ಮನವಿ ಮಾಡಿದ ಮಹಿಳೆಯರು!

ಸಾಲ ಮರುಪಾವತಿ ವಿಸ್ತರಣೆಗೆ ಮನವಿ ಮಾಡಿದ ಮಹಿಳೆಯರು

698
0

ವರದಿ; ಅಶೋಕ್.ಎಂ, ಕೋಲಾರ

ಅದು ರೈತರು ಸ್ವಾವಲಂಭಿಗಳಾಗಲು, ಮಹಿಳೆಯರು ಸಶಕ್ತರಾಗಲು ನೆರವಾಗಿರುವ ಬ್ಯಾಂಕ್. ಆದ್ರೆ ಲಾಕ್‌ಡೌನ್‌ನಿಂದ ಎಲ್ಲಾ ಚಟುವಟಿಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಕ್ಲಿಷ್ಟಕರವಾಗಿದೆ. ಪರಿಣಾಮ ಸಾಲ ಮರು ಪಾವತಿ ಅವಧಿ ವಿಸ್ತರಣೆ ಮಾಡುವಂತೆ ಒತ್ತಾಯಿಸಿ ಲಕ್ಷಾಂತರ ಮಹಿಳೆಯರು ಮನವಿ ಮಾಡುತ್ತಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಲದ ಕಂತು ಮರುಪಾವತಿಗೆ ಸಂಕಷ್ಟ ಎದುರಾಗಿದ್ದು, ಕೃಷಿ ಕ್ಷೇತ್ರ ಸೇರಿದಂತೆ ಕೂಲಿ ನಾಲಿ ಸಿಗದೆ ಮಹಿಳೆಯರು ಹಾಗೂ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹಾಗಾಗಿ ರೈತರು, ಮಹಿಳೆಯರು ಸಾಲ ಮರು ಪಾವತಿ ಮುಂದೂಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡುತ್ತಿದ್ದಾರೆ. ಹೌದು ಕಳೆದ ವರ್ಷ ಲಾಕ್‌ಡೌನ್ ಸಂದರ್ಭದಲ್ಲಿ ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬಗೆಯ ಸಾಲದ ಕಂತು ಪಾವತಿಗೆ ಕೆಲವು ತಿಂಗಳುಗಳ ಕಾಲ ವಿನಾಯಿತಿ ನೀಡಿತ್ತು. ಆದರೆ ಈ ಬಾರಿ ಆರ್‌ಬಿಐ ಈವರೆಗೆ ಯಾವುದೇ ವಿನಾಯಿತಿ ಘೋಷಿಸಿಲ್ಲ. ಹಾಗಾಗಿ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ೨೫ ಸಾವಿರ ಸ್ತ್ರೀಶಕ್ತಿ ಸಂಘಗಳಿಗೆ ೫೫೦ ಕೋಟಿ ಸಾಲ ನೀಡಲಾಗಿದೆ. ಇದೀಗ ಸಾಲ ವಸೂಲಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬ್ಯಾಂಕ್ ಸಿಬ್ಬಂದಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಕರೆ ಮಾಡಿ ಸಾಲದ ಕಂತು ಕಟ್ಟುವಂತೆ ಮೌಖಿಕ ಸೂಚನೆ ನೀಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಂಕಷ್ಟದಿಂದ ಎಲ್ಲೆಡೆ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಹಾಗಾಗಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲದ ಕಂತು ಕಟ್ಟಲಾಗದೆ ಗೊಂದಲಕ್ಕೆ ಸಿಲುಕಿದ್ದು ಸರ್ಕಾರವನ್ನ ಮನವಿ ಮಾಡುತ್ತಿದ್ದಾರೆ

ಇನ್ನೂ ಕೊರೊನಾ ಭೀತಿಯಲ್ಲಿ ಮಹಿಳೆಯರಿಗೆ ಕೂಲಿ ಸಿಗುತ್ತಿಲ್ಲ ಹಾಗಾಗಿ ಆದಾಯವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಈ ಮಧ್ಯೆ ಪ್ರತಿ ವಾರ ಸ್ತ್ರೀಶಕ್ತಿ ಸಂಘಗಳ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ಸಾಲದ ಕಂತಿನ ಹಣ ಸಂಗ್ರಹ ಮಾಡುವುದು ಕಷ್ಟವಾಗಿದೆ. ಸಕಾಲಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಸಂಘಗಳ ಮೇಲೆ ಬಡ್ಡಿಯ ಹೊರೆ ಬೀಳಲಿದೆ. ರಾಜ್ಯ ಸರ್ಕಾರ ಆದೇಶ ಹೊರಡಿಸಿ ಸಾಲ ಪಾವತಿ ಅವಧಿ ವಿಸ್ತರಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಮಹಿಳೆಯರ ವಾದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಿಂದಿನ ವರ್ಷದಂತೆಯೇ ಸಾಲದ ಕಂತು ಪಾವತಿ ಅವಧಿಯನ್ನು ಕನಿಷ್ಠ ೩ ತಿಂಗಳವರೆಗೆ ಮುಂದೂಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಇನ್ನೂ ಲಾಕ್‌ಡೌನ್‌ನಿಂದ ಜನರು ಅನುಭವಿಸುತ್ತಿರುವ ಕಷ್ಟದ ಅರಿವಿದೆ, ಸಹಕಾರಿ ಬ್ಯಾಂಕ್‌ಗಳಿಗೆ ಸಾಲದ ಕಂತು ಪಾವತಿ ಅವಧಿ ಮುಂದೂಡುವ ಅಧಿಕಾರವಿಲ್ಲ ಹಾಗಾಗಿ ಸರ್ಕಾರದ ಮಟ್ಟದಲ್ಲೇ ನಿರ್ಧಾರವಾಗಬೇಕು ಎನ್ನುತ್ತಾರೆ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ.

ಒಟ್ನಲ್ಲಿ ರೈತರ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ ಮರು ಪಾವತಿ ಮುಂದೂಡಲು ಸರ್ಕಾರ ಮುಂದಾಗಿದೆ. ಅದರಂತೆ ಸಹಕಾರಿ ಬ್ಯಾಂಕ್‌ಗಳ ಸ್ತ್ರೀ ಶಕ್ತಿ ಸಂಘಗಳ ಸಾಲ ಮರು ಪಾವತಿಯೂ ಮುಂದೂಡಿ ಕೋಟ್ಯಾಂತರ ಹೆಣ್ಣು ಮಕ್ಕಳಿಗೆ ನೆರವಾಗಬೇಕು ಎಂಬುದು ಸ್ತ್ರೀ ಶಕ್ತ ಸಂಘಟನೆಗಳ ಒತ್ತಾಯವಾಗಿದೆ.

VIAಸಾಲ ಮರುಪಾವತಿ ವಿಸ್ತರಣೆಗೆ ಮನವಿ ಮಾಡಿದ ಮಹಿಳೆಯರು
SOURCEಸಾಲ ಮರುಪಾವತಿ ವಿಸ್ತರಣೆಗೆ ಮನವಿ ಮಾಡಿದ ಮಹಿಳೆಯರು
Previous articleಲಸಿಕೆಯ ವಿಚಾರವಾಗಿ ಕಿಚ್ಚ ಸುದೀಪ್ ಹೇಳಿದ್ದೇನು?
Next articleಮರು ಲಾಕ್ ಡೌನ್ ನ ಸುಳಿಹು ನೀಡಿದ ಕೇಂದ್ರ ಸಚಿವ ಸದಾನಂದಗೌಡ

LEAVE A REPLY

Please enter your comment!
Please enter your name here