ಮಹಾರಾಷ್ಟ್ರ. ದೇಶದಲ್ಲಿ ಕೊರೊನಾ ಮಹಾಮಾರಿ ಲಗ್ಗೆ ಇಟ್ಟಾಗಿನಿಂದ ಜನರು ಆತಂಕಿತರಾಗಿ ಬದುಕುತ್ತಾ ಇದ್ದರೆ, ಕೊರೊನಾ ವಾರಿಯರ್ಸ್ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರೋಗದ ವಿರುದ್ಧ ಹೋರಾಡುತ್ತಾ ಇದ್ದಾರೆ. ಈ ಮಧ್ಯೆ ಜನರು ಕೂಡ ಈ ಸಮಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಬದುಕುವ ದಾರಿಯನ್ನು ರೂಢಿಸಿಕೊಂಡಿದ್ದರು.
ಒಂದಷ್ಟು ಜನ ತಮ್ಮ ಉಡುಪಿಗೆ ಹೊಂದಾಣಿಕೆಯಾಗುವ ಮಾಸ್ಕ್ ಗಳನ್ನು ಹಾಕಿಕೊಂಡು ತಾವು ಎಲ್ಲರಿಗಿಂತ ಭಿನ್ನ ಅಂತಾ ಅನಿಸಿಕೊಳ್ಳೋಕೆ ಹೋದರೆ ಇಲ್ಲೊಬ್ಬ ಮಾತ್ರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಾ ನಿಮ್ಮೆಲ್ಲರಿಗಿಂತಲೂ ನಾನೇ ವಿಭಿನ್ನ ಅನಿಸಿಕೊಂಡಿದ್ದಾನೆ.
ಮಹಾರಾಷ್ಟ್ರದ ಶಂಕರ್ ಕುರಾಡೆ ಎಂಬಾತ ಈ ವಿಭಿನ್ನ ವ್ಯಕ್ತಿಯಾಗಿದ್ದು ಚಿನ್ನದ ಮಾಸ್ಕ್ ಹಾಕೋ ಮೂಲಕ ಜನರಿಂದ ಆಕರ್ಷಣೆಗೆ ಒಳಗಾಗಿದ್ಧಾರೆ. ವಿಶೇಷ ಅಂದರೆ ಬರೋಬ್ಬರಿ 2.89 ಲಕ್ಷ ರೂಪಾಯಿ ಮೌಲ್ಯದ ಮಾಸ್ಕ್ ಇದಾಗಿದ್ದು, ಸ್ಥಳೀಯ ಜನರು ಈ ವ್ಯಕ್ತಿಯ ಮಾಸ್ಕ್ ನೋಡಲೆಂದೇ ಆತನ ಹತ್ತಿರ ಬರುತ್ತಿದ್ದಾರೆ ಎನ್ನಲಾಗಿದೆ.
ತೆಳು ಪದರದಿಂದ ಮಾಡಲ್ಪಟ್ಟಿರುವ ಈ ಚಿನ್ನದ ಮಾಸ್ಕ್ ಐದು ರಂಧ್ರಗಳನ್ನು ಹೊಂದಿದೆ. ಹೀಗಾಗಿ ಉಸಿರಾಟ ನಡೆಸಲು ಯಾವುದೇ ಅಡ್ಡಿಇಲ್ಲ. ಈ ಚಿನ್ನದ ಮಾಸ್ಕ್ ಎಷ್ಟು ಪರಿಣಾಮಕಾರಿ ಅನ್ನೋದರ ಕುರಿತು ನನಗೆ ಮಾಹಿತಿ ಇಲ್ಲ ಎಂದು ಶಂಕರ್ ಕುರಾಡೆ ಹೇಳಿದ್ದಾರೆ.