ಹೆತ್ತ ಮಗಳನ್ನೇ ಹೊಡೆದು ಕೊಂದ ತಂದೆ ತಾಯಿ: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಅಂತರಾಷ್ಟ್ರೀಯ

ನಾಗಪುರ : ಹೆತ್ತ ತಂದೆ-ತಾಯಿಯೇ ತಮ್ಮ ಆರು ವರ್ಷದ ಮಗಳಿಗೆ ದೆವ್ವ ಹಿಡಿದಿದೆ ಎಂದುಕೊಂಡು ಬಾಲಕಿಯನ್ನು ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ಸುಭಾಷ್ ನಗರದ ನಿವಾಸಿಗಳಾದ ಸಿದ್ಧಾರ್ಥ್ ಚಿಮನೆ ಮತ್ತು ರಂಜನಾ ಚಿಮನೆ ಎಂಬುವವರ ಮಗಳು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ವೇಳೆ ಆಕೆಯ ಹಾವಭಾವಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಮಗಳಿಗೆ ದೆವ್ವ ಹಿಡಿದಿದೆ ಎಂದು ಪೋಷಕರು ಅನುಮಾನಗೊಂಡಿದ್ದು, ನಕಲಿ ಬಾಬಾನ ಬಳಿಗೂ ಬಾಲಕಿಯನ್ನು ಕರೆದುಕೊಂಡು ಹೋಗಿದ್ದರು.

ಬಾಬಾನ ಸಲಹೆಯ ಮೇರೆಗೆ ಬಾಲಕಿಗೆ ವಿವಿಧ ರೀತಿಯ ಚಿಕಿತ್ಸೆಗಳನ್ನು ನೀಡಲು ಪ್ರಾರಂಭಿಸಿದ್ದರು. ಆದರೂ, ಯಾವುದೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಸಿದ್ದಾರ್ಥ್, ರಂಜನಾ ಹಾಗೂ ಮತ್ತೊಬ್ಬ ಮಹಿಳೆ ಬಾಲಕಿಗೆ ಅಮಾನುಷವಾಗಿ ಥಳಿಸಿದ್ದಾರೆ. ಈ ವೇಳೆ ಹೊಡೆತಗಳನ್ನು ತಾಳಲಾರದೆ ಬಾಲಕಿ ಕುಸಿದುಬಿದ್ದಿದ್ದಾಳೆ.

ಈ ವೇಳೆ ಗಾಬರಿಗೊಂಡ ಪೋಷಕರು ಕೂಡಲೇ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ತಾವು ಸಿಕ್ಕಿಬೀಳಬಹುದು ಎಂಬ ಭಯದಿಂದ ಬಾಲಕಿಯ ಶವವನ್ನು ಆಸ್ಪತ್ರೆ ಆವರಣದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಪೊಲೀಸರು ತನಿಖೆಯ ವೇಳೆ ಬಾಲಕಿಯ ಪೂರ್ವಪರ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಂದೆ-ತಾಯಿ ಪತ್ತೆಯಾಗಿದ್ದಾರೆ. ಅಲ್ಲದೇ, ತಂದೆ ಸಿದ್ಧಾರ್ಥ ಚಿಮನೆ, ತಾಯಿ ರಂಜನಾ ಚಿಮನೆ ಹಾಗೂ ರಂಜನಾಳ ಸಹೋದರಿ ಮೂವರನ್ನೂ ವಿಚಾರಣೆಗೆ ಒಳಪಡಿಸಿದಾಗ ಈ ಕೃತ್ಯ ಬಯಲಿಗೆ ಬಂದಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Leave a Reply

Your email address will not be published.