
ತಾಯಿ ಸಾಲ ಕೊಡಲಿಲ್ಲ ಅಂತ ಮಗನ ಕಿಡ್ನಾಪ್..! Kidnap ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಬಂಧನ
ಬೆಂಗಳೂರು: ಮಹಿಳೆ ಸಾಲ ನೀಡಿಲ್ಲವೆಂದು ಆಕೆಯ ಮಗನನ್ನು ಕಿಡ್ನ್ಯಾಪ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ತಾಯಿ ಶಾಂತಾ ಸಾಲ ನೀಡಿಲ್ಲವೆಂದು ಮಾರ್ಚ್ 6ರಂದು ಮಗ ಪವನ್ನನ್ನು ಆರೋಪಿ ರವಿ ಅಪಹರಿಸಿದ್ದ. ಇದೀಗ ಆತನನ್ನು ವಿದ್ಯಾ ರಣ್ಯಪುರ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಶಾಂತಾ ಕುಟುಂಬಕ್ಕೆ ರವಿ ಎಂಬಾತ ಕಳೆದ ಆರು ವರ್ಷಗ ಳಿಂದ ಪರಿಚಯ. ಮೂರು ವರ್ಷಗಳ ಹಿಂದೆ ಹಣ ಅವಶ್ಯಕತೆ ಇರೋದಾಗಿ ಹೇಳಿ ಶಾಂತಾ ಅವರ ಬಳಿ ರವಿ ಸಾಲ ಕೇಳಿದ್ದನು. ಆದರೆ ಶಾಂತಾ ಹಣ ನೀಡಿರಲಿಲ್ಲ. ಇತ್ತೀಚೆಗೆ ಶಾಂತಾ ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದರು.
ಈ ವೇಳೆ ರವಿ, ತಾನು ಜಮೀನು ಮಾರಾಟ ಮಾಡುತ್ತೇನೆ. ಮಾರಾಟ ಮಾಡಿಸಿದ್ದಕ್ಕೆ ಕಮಿಷನ್ ರೂಪದಲ್ಲಿ ಸಾಲ ನೀಡುವಂತೆ ಹೇಳಿ ದ್ದನು. ಆದ್ರೆ ರವಿಯ ಮಧ್ಯಸ್ಥಿಕೆಗೆ ಶಾಂತಾ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ರವಿ ತನ್ನಿಬ್ಬರು ಮಕ್ಕಳೊಂದಿಗೆ ಶಾಂತಾ ಅವರ ಮಗ ಪವನ್ ಎಂಬಾತನನ್ನು ಬಂಧಿಸಿ , 7 ಲಕ್ಷ ರೂ. ಗೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ಶಾಂತ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಹಣ ಕೊಡುವುದಾಗಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿದ ಖಾಕಿ ಹೆಚ್ಚಿನ ವಿಚಾರಣೆಗೆ ಕೈಗೊಂಡಿದ್ದಾರೆ.