ಮೈಷುಗರ್ ಈ ಹಂತಕ್ಕೆ ಬರುತ್ತೆ ಅಂತ ಯಾರೂ ನಂಬಿರಲಿಲ್ಲ, ಇದರಲ್ಲಿ ನನ್ನ ಪ್ರಯತ್ನವೂ ಇದೆ; ಸಂಸದೆ ಸುಮಲತಾ

ಜಿಲ್ಲೆ

ಮಂಡ್ಯ :- ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನತೆಗೆ ಮಾತು ಕೊಟ್ಟಂತೆ ಮೈಷುಗರ್ ಕಾರ್ಖಾನೆ ಪುನರಾರಂಭ ಮಾಡುವ ಮೂಲಕ ಭರವಸೆ ಈಡೇರಿಸಿದ್ದು, ಇಂದು ಪ್ರಾರಂಭ ಮಾಡಲಾಗುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹರ್ಷ ವ್ಯಕ್ತಪಡಿಸಿದರು. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಷುಗರ್ ಕಾರ್ಖಾನೆಗೆ ಗುರುವಾರ ಬಾಯ್ಲರ್ ಗೆ ಅಗ್ನಿ ಸ್ಪರ್ಶ ಮಾಡಲಾಗುತ್ತಿದೆ. ಇದು ನನಗೆ ಸಂತಸದ ದಿನವಾಗಿದ್ದು, 3 ವರ್ಷಗಳ ಸತತ ಪ್ರಯತ್ನ ಫಲ ಕೊಟ್ಟಿದೆ ಎಂದರು.

ರಾಜ್ಯದಲ್ಲಿಯೇ ಸರ್ಕಾರಿ ಸ್ವಾಮ್ಯದಲ್ಲಿ ಇರುವ ಏಕೈಕ ಸಕ್ಕರೆ ಕಾರ್ಖಾನೆ ಎಂದರೇ ಅದು ಮೈಷುಗರ್ ಕಾರ್ಖಾನೆ. ಕಳೆದ ನಾಲ್ಕು ವರ್ಷಗಳಿಂದ ಹಲವು ಕಾರಣಗಳಿಂದ ಕಾರ್ಖಾನೆ ಮುಚ್ಚಲ್ಪಟ್ಟಿತ್ತು. ಆದರೆ ಅದನ್ನು ಸರ್ಕಾರಿ ಸ್ವಾಮ್ಯದಲ್ಲೆ ಉಳಿಸಿಕೊಳ್ಳುವ ಉದ್ದೇಶದಿಂದ ನಾನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಮಾತು ಕೊಟ್ಟಿದ್ದೆ. ಏನೇ ಆದರೂ ಕಾರ್ಖಾನೆಯನ್ನು ಪುನಾರಂಭಿಸಿ ಲಾಗುವುದು ಎಂದು ರೈತರಿಗೆ ಭರವಸೆ ನೀಡಿದ್ದೆ. ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿ ಸರ್ಕಾರಿ ಸ್ವಾಮ್ಯದಲ್ಲೆ ಇಂದು ಮೈಷುಗರ್ ಪ್ರಾರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.Mysugar-comes-to-this-stage

ಕಾರ್ಖಾನೆ ತೆಗೆಸೋದೆ ಒಂದು ಹೋರಾಟ ಆಗಿತ್ತು. ಯಂತ್ರೋಪಕರಣಗಳು ಕೆಟ್ಟು ನಿಂತಿದ್ದವು. ಕಾರ್ಮಿಕರ ಹಲವು ಸಮಸ್ಯೆಗಳಿದ್ದವು. ನಾನು ಹೋದ ಕಡೆಯಲ್ಲ ಕಾರ್ಖಾನೆ ಪ್ರಾರಂಭ ಮಾಡಿಸಿ ಅಂತ ಜಿಲ್ಲೆಯ ಜನತೆ ಮನವಿ ಮಾಡಿದ್ದರು. ಸಾಧ್ಯವಾದಷ್ಟು ಸಮಸ್ಯೆಗಳನ್ನು ಬಗೆಹರಿಸಿ ಕಾರ್ಖಾನೆ ಪ್ರಾರಂಭಕ್ಕೆ ಸಿದ್ದತೆಯಾಗಿದೆ.

ಮೈಷುಗರ್ ಕಾರ್ಖಾನೆಯನ್ನು ಖುದ್ದು ಪರಿಶೀಲನೆ ನಡೆಸಿದೆ. ರೈತ ಮುಖಂಡರ ಸಭೆ ನಡೆಸಿದ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಪ್ರಾರಂಭಕ್ಕೆ ಕೊಟ್ಯಾಂತರ ರೂಪಾಯಿ ಅನುದಾನ ಬೇಕಾಗುತ್ತದೆ ಎಂದು ಮನವರಿಕೆಯಾಯಿತು. ಇದರ ಜೊತೆಗೆ ಜಿಲ್ಲೆಯ ಕೆಲ ರೈತ, ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ನಡೆಸಬೇಕು ಯಾವುದೇ ಕಾರಣಕ್ಕೂ ಖಾಸಗಿಕರಣ ಮಾಡಬಾರದು ಎಂದು ಮನವಿ ಹಾಗೂ ಹೋರಾಟಗಳನ್ನು ನಡೆಸಿದ್ದರು.

ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ನಿರಂತರವಾಗಿ ಭೇಟಿ ಮಾಡಿ ಮೈಷುಗರ್ ಕಾರ್ಖಾನೆ ಪ್ರಾರಂಭಕ್ಕೆ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದ್ದೆ, ನನ್ನ ಮನವಿಗೆ ಸ್ಪಂದಿಸಿದ ಸಿಎಂ ಕಾರ್ಖಾನೆ ಪ್ರಾರಂಭಕ್ಕೆ ಬಜೆಟ್ ನಲ್ಲಿ 50 ಕೋಟಿ ಅನುದಾನ ಬಿಡುಗಡೆ ಮಾಡಿದರು. ಕಾರ್ಖಾನೆಯಲ್ಲಿ ಯಾವುದೇ ದುರುಪಯೋಗ ಆಗದಿರಲಿ ಎಂಬ ಉದ್ದೇಶದಿಂದ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಯಂತ್ರೋಪಕರಣಗಳ ದುರಸ್ತಿ ಕಾರ್ಯ ಮುಗಿದಿದ್ದು, ಕಬ್ಬು ನುರಿಯಲು ಕಾರ್ಖಾನೆ ಸಿದ್ದತೆಗೊಂಡಿದೆ.

ಮೈಷುಗರ್ ಕಾರ್ಖಾನೆ ಈ ಹಂತಕ್ಕೆ ಬರುತ್ತದೆ ಅಂತ ಯಾರೂ ಕೂಡ ನಂಬಿರಲಿಲ್ಲ. ಈ ಹಂತಕ್ಕೆ ಇಂದು ಬಂದಿದೆ ಎಂದರೇ ಅದು ಒಂದು ದೊಡ್ಡ ಸಾಧನೆ ಅಲ್ಲವೇ? ಇನ್ನು ಕಾರ್ಖಾನೆಯನ್ನು ಕೆಲ ದಿನಗಳ ಕಾಲ ನಡೆಸಿ ನಿಲ್ಲಿಸುವುದಿಲ್ಲ. ಕಾರ್ಖಾನೆ ವರ್ಷಪೂರ್ತಿ ನಡೆಯುವ ರೀತಿ ಜಿಲ್ಲೆಯ ಜನಪ್ರತಿನಿಧಿಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ವರದಿ : ಗಿರೀಶ್ ರಾಜ್ ಮಂಡ್ಯ

Leave a Reply

Your email address will not be published.