Home Politics ನಾಮದೇವ ಸಿಂಪಿ ಸಮಾಜವನ್ನು ಪ್ರವರ್ಗ-1 ಕ್ಕೆ ಸೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ನಾಮದೇವ ಸಿಂಪಿ ಸಮಾಜವನ್ನು ಪ್ರವರ್ಗ-1 ಕ್ಕೆ ಸೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

622
0

ನಾಮದೇವ ಸಿಂಪಿ ಸಮಾಜವನ್ನು ಪ್ರವರ್ಗ-1 ಕ್ಕೆ ಸೇರಿಸಿ ಮೀಸಲಾತಿಯನ್ನು ಶೇ.8 ರಷ್ಟು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ಪದಾಧಿಕಾರಿಗಳಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಚಲನಚಿತ್ರ ಮಂಡಳಿಯ ಗೌರವ ಕಾರ್ಯದರ್ಶಿ, ನಿರ್ಮಾಪಕ ಹಾಗೂ ಸಿಂಪಿ ಸಮಾಜದ ಅಧ್ಯಕ್ಷ ಎನ್.ಎಂ.ಸುರೇಶ್ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈಗಾಗಲೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ನಾಮದೇವ ಸಮಾಜದ  ಹಿತದೃಷ್ಟಿಯಿಂದ ಇತ್ತೀಚೆಗೆ ಸಮುದಾಯದ ಗಣ್ಯರು  ಧಾರವಾಡದಲ್ಲಿ ರಾಜ್ಯಮಟ್ಟದ ಚಿಂತನ – ಮಂಥನ” ಕಾರ್ಯಕ್ರಮ ನಡೆಸಿ, ಮೀಸಲಾತಿಯಲ್ಲಿದ್ದ ಗೊಂದಲ ಹಾಗೂ ನಮ್ಮ ಸಮುದಾಯದ ಜನರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಹಾಗೂ ನಮ್ಮ ಸಮುದಾಯವು ಮುಂದೆ ಎದುರಿಸಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಹೀಗಾಗಿ ನಮ್ಮ ಸಮುದಾಯಕ್ಕೆ ಆಗಿರುವ ಆಗುತ್ತಿರುವ / ಆಗಲಿರುವ ಅನ್ಯಾಯ ನಿವಾರಿಸಿ , ಈಗಿರುವ ಮೀಸಲಾತಿ ನಿಯಮಗಳ ಅನುಸಾರ ನಾಮದೇವ ಸಿಂಪಿ ಜಾತಿಯನ್ನು ಪ್ರವರ್ಗ 2 ಎ ಅಡಿಯಲ್ಲಿ ಪ್ರತ್ಯೇಕ ಪ್ರವರ್ಗವನ್ನಾಗಿ ಗುರುತಿಸಬೇಕು. ಸಮುದಾಯಕ್ಕೆ ಪ್ರತ್ಯೇಕವಾಗಿ 5 ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು ಅಥವಾ ನಾಮದೇವ ಸಿಂಪಿ ‘ ಜಾತಿಯನ್ನು ಪ್ರವರ್ಗ 1 ರಲ್ಲಿ ಪರಿಗಣಿಸಿ ಈಗ ಪ್ರವರ್ಗ 1 ಕ್ಕೆ ನಿಗದಿಪಡಿಸಿದ 4 ರಷ್ಟು ಮೀಸಲಾತಿ ಮಿತಿಯನ್ನು 8 ರಷ್ಟಕ್ಕೆ ಏರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

 

ಮನವಿ ಸಲ್ಲಿಕೆ ಬಳಿಕ ಮಾತನಾಡಿದ ಸಮಾಜದ ಅಧ್ಯಕ್ಷ ಎನ್ ಎಂ ಸುರೇಶ್, “ನಾಮದೇವ ಸಿಂಪಿ ಸಮಾಜವು ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ ಸಮಕಾಲೀನದ್ದಾಗಿದ್ದು, ಜ್ಞಾನೇಶ್ವರ ಮಹಾರಾಜರ ಧಾರ್ಮಿಕ ವಿಚಾರಗಳಿಂದ ಪ್ರಭಾವಿತರಾಗಿ ಸಂತ ನಾಮದೇವರ ಭಕ್ತಿ ಮಾರ್ಗವನ್ನು ರಾಷ್ಟ್ರಾದ್ಯಂತ ಪ್ರಸಾರ ಮಾಡಿ ವಾರಕರಿ ಸಂಪ್ರದಾಯದ ಹಿರಿಮೆಯನ್ನು ಎತ್ತಿಹಿಡಿದಿದೆ. ರಾಜ್ಯದಲ್ಲಿ ಸುಮಾರು 3 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನಾಮದೇವ ಸಿಂಪಿ ಸಮಾಜದ ಬಾಂಧವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು,  ಬಟ್ಟೆ ಹೊಲಿಯುವ (ದರ್ಜಿ ಕೆಲಸ) ಸಮಾಜದ ಮೂಲ ಕಸುಬನ್ನು ಶತಮಾನಗಳಿಂದ ಸಮಾಜದ ಜನರು ನಂಬಿಕೊಂಡು ಹಾಗೆಯೇ ಬಟ್ಟೆ ಹೊಲಿದು ಸಿದ್ಧ ಉಡುಪುಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಪ್ರಸಕ್ತ ಮೀಸಲಾತಿ ಅನ್ವಯ ಪ್ರವರ್ಗ 2ಎ ಗೆ ಸಮುದಾಯವನ್ನು ಸೇರಿಸಿದ್ದು, ಇದಕ್ಕೆ ಪ್ರವರ್ಗ 2ಎಗೆ  15 ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಈಗಾಗಲೇ ಪ್ರವರ್ಗ 2 ನಲ್ಲಿ ಸುಮಾರು 380 ಜಾತಿಗಳನ್ನು ಸೇರಿಸಿದ್ದು, ನಾಮದೇವ ಸಿಂಪಿ ಸಮುದಾಯದವರನ್ನು ಹೊರತು ಪಡಿಸಿ ಬಹುಸಂಖ್ಯಾತ ಬೇರೆ, ಬೇರೆ ಜಾತಿಯ ಸಮುದಾಯಗಳು ಸಹ ಇತ್ತೀಚೆಗೆ ಪ್ರವರ್ಗ 2 ಎ ನಡಿ ತಮ್ಮನ್ನು ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿವೆ.  ಈಗಲೇ ಪ್ರವರ್ಗ 2ಎ ನ 15 ರಷ್ಟು ಮೀಸಲಾತಿಯಲ್ಲಿ ನಾಮದೇವ ಸಿಂಪಿ ಸಮಾಜಕ್ಕೆ ಈಗಲೇ ಅತ್ಯಲ್ಪ ಸೌಲಭ್ಯ ಸಿಗುತ್ತಿದ್ದು, ಒಂದು ವೇಳೆ ಬಹುಸಂಖ್ಯೆಯ ಬೇರೆ, ಬೇರೆ ಜಾತಿಗಳನ್ನು ಪ್ರವರ್ಗ2 ಎಗೆ ಸೇರಿಸಿದಲ್ಲಿ ನಮ್ಮ ಸಮಾಜಕ್ಕೆ ಸಿಗುತ್ತಿರುವ ಅತ್ಯಲ್ಪ ಸೌಲಭ್ಯವು ಇನ್ನೂ ಸಹ ಕಡಿಮೆಯಾಗಲಿದೆ. ಪ್ರವರ್ಗ 2 ಎನಲ್ಲಿಯೇ ನಾಮದೇವ ಸಿಂಪಿ ಸಮಾಜ ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ,” ಎಂದು ಆತಂಕ ವ್ಯಕ್ತಪಡಿಸಿ, “ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು” ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಮನವಿ ಸಲ್ಲಿಕೆ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಇರಾಣಿ ನಾಗರಾಜ್, ಡಾ.ಉಲ್ಲಾಸ್ ಡಿ.ಬೊಂಗಾಳೆ, ಉಪಾಧ್ಯಕ್ಷರಾದ ಶಂಕರ್ ಖಟಾವ್ಕರ್, ನಾರಾಯಣ್ ಬಿ.ಚಿಕ್ಕೋರ್ಡೆ, ಜಂಟಿ ಕಾರ್ಯದರ್ಶಿಗಳಾದ ಎಲ್.ಎನ್.ಮಹೇಂದ್ರಕರ್, ಪ್ರೇಮಕುಮಾರ್ ಬಿ.ಮಾಳವದೆ, ಸಂಘಟನಾ ಕಾರ್ಯದರ್ಶಿ ಎಸ್. ಎಸ್. ರಾಘವೇಂದ್ರರಾವ್, ಖಜಾಂಚಿ ಎಂ. ಪಿ.ರಾಜೇಶ್, ಮಹಿಳಾಧ್ಯಕ್ಷೆ ಲೀಲಾ ಧ್ಯಾನದೇವ್ ವಂಡ್ಕರ್ ಹಾಜರಿದ್ದರು.

 

Previous articleಪ.ಬಂಗಾಳದಲ್ಲಿ ಚುನಾವಣೆ ವೇಳೆ ಹಿಂಸಾಚಾರ; ಫೈರಿಂಗ್ ಗೆ ಓರ್ವ ವ್ಯಕ್ತಿ ಬಲಿ
Next articleಹೊಸಬೆಳಕು; ರಾಶಿಗೆ ಅನುಗುಣವಾಗಿ ವಿವಾಹ ಯೋಗದ ಬಗ್ಗೆ ವಿದ್ವಾನ್ ಆಚಾರ್ಯ ತಾಮ್ರಪರ್ಣಿ ಗುರೂಜಿಯವರಿಂದ ವಿಶೇಷ ಮಾರ್ಗದರ್ಶನ

LEAVE A REPLY

Please enter your comment!
Please enter your name here