ಮಲ್ಲೇಶ್ವರಂ ನಲ್ಲಿ ಹೊಸದಾಗಿ ಸಂಸ್ಥೆಗಳನ್ನು ಕಟ್ಟಲು ಜಾಗವೇ ಇಲ್ಲದಂತಾಗಿದೆ: ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ

ಬೆಂಗಳೂರು

ಬೆಂಗಳೂರು; ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪೂರೈಸುವ ಸಂಸ್ಥೆಗಳೇ ಸಮಾಜದ ಪ್ರಗತಿಗೆ ಆಧಾರ ಸ್ತಂಭಗಳಾಗಿವೆ ಎಂದು ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. ಮಲ್ಲೇಶ್ವರಂ ಕ್ಷೇತ್ರದ ಶ್ರೀ ವಿದ್ಯಾಮಂದಿರದ ಸಂಸ್ಥಾಪನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಲ್ಲೇಶ್ವರಂ ಕ್ಷೇತ್ರದಲ್ಲಿ ಹಲವು ಹೆಸರಾಂತ ಶಿಕ್ಷಣ ಸಂಸ್ಥೆಗಳಿವೆ. ಅದರಲ್ಲಿ ಶ್ರೀ ವಿದ್ಯಾಮಂದಿರಕ್ಕೆ ಅಗ್ರ ಸ್ಥಾನವಿದೆ. ಇದಕ್ಕೆ ಸಂಸ್ಥೆಯ ಸ್ಥಾಪಕರಾದ ಲೀಲಾವತಿ ಅವರ ಕೊಡುಗೆ ಕಾರಣ ಎಂದು ಅವರು ನುಡಿದರು. ಇಂದು ಮಲ್ಲೇಶ್ವರಂ ನಲ್ಲಿ ಹೊಸದಾಗಿ ಸಂಸ್ಥೆಗಳನ್ನು ಕಟ್ಟಲು ಜಾಗವೇ ಇಲ್ಲದಂತಾಗಿದೆ‌.

ವೈಯಕ್ತಿಕ ಬದುಕಿಗೆ ಬಂಗಲೆಗಳನ್ನು ಬಯಸುವ ನಾವು ಶಿಕ್ಷಣ ಸಂಸ್ಥೆಗಳನ್ನು ಅಂಗೈಯಗಲದ ಜಾಗದಲ್ಲಿ ಕಟ್ಟಲು ಹೊರಟಿರುವುದು ದುರಂತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸಲು ಶಿಕ್ಷಣ ಅತ್ಯಗತ್ಯ. ಆದರೆ ಕಳೆದ ನಾಲ್ಕೈದು ದಶಕಗಳಲ್ಲಿ ಇದನ್ನು ಮರೆತಿದ್ದರಿಂದ ಇಂದು ಎಲ್ಲರೂ ಕೆಲಸಕ್ಕೆ ಬಾರದ ಇಂಜಿನಿಯರ್ ಗಳು ಮತ್ತು ಪದವೀಧರರು ಕಾಣುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಒಳ್ಳೆಯ ಶಿಕ್ಷಕರನ್ನು ತಮ್ಮ ಸಂಸ್ಥೆಯ ಆಸ್ತಿಯೆಂದು ಭಾವಿಸಿದ್ದ ಲೀಲಾವತಿ ಅವರಂತಹ ಚೇತನಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕಾಗಿದೆ. ಇಂತಹವರ ಅಗತ್ಯವನ್ನು ಸಮಾಜ ಕೂಡ ಮನಗಾಣಬೇಕು ಎಂದು ಸಚಿವರು ಹೇಳಿದರು.

Leave a Reply

Your email address will not be published.