ಪಾಕಿಸ್ತಾನ ಸದ್ಯದಲ್ಲೇ ಕಷ್ಟದ ದಿನಗಳನ್ನು ನೋಡಲಿದೆ: ಪಾಕ್ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್

ಅಂತರಾಷ್ಟ್ರೀಯ

ಇಸ್ಲಾಮಾಬಾದ್: ಹಣದ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ಸದ್ಯದಲ್ಲೇ ಕಷ್ಟದ ದಿನಗಳನ್ನು ನೋಡಲಿದೆ. ಹೀಗಾಗಿ ಮುಂದಿನ 3 ತಿಂಗಳುಗಳ ಕಾಲ ಆಮದುಗಳನ್ನು ನಿರ್ಬಂಧಿಸುವುದನ್ನು ಮುಂದುವರೆಸುವುದೇ ಉತ್ತಮ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಸಲಹೆ ನೀಡಿದ್ದಾರೆ.

ಪಾಕಿಸ್ತಾನ ಸ್ಟಾಕ್ ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ಮಾಯಿಲ್, ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್‌ನ ಆಡಳಿತದ ಆರ್ಥಿಕ ನೀತಿಗಳಿಂದ ಈಗಿನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಸಂಕಷ್ಟದಲ್ಲಿದೆ ಎಂದರು.

ಹಿಂದಿನ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಸರ್ಕಾರದ ಅವಧಿಯಲ್ಲಿ ದೇಶದ ಬಜೆಟ್ ಕೊರತೆ 1,600 ಶತಕೋಟಿ ಡಾಲರ್‌ನಷ್ಟು ಆಗಿತ್ತು. ಕಳೆದ 4 ವರ್ಷಗಳಲ್ಲಿ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಆಡಳಿತದಲ್ಲಿ ಆ ಅಂಕಿ 3,500 ಶತಕೋಟಿ ಡಾಲರ್‌ಗೆ ಏರಿತು. ಈ ರೀತಿಯ ಕೊರತೆಗಳಿಂದ ಯಾವುದೇ ದೇಶ ಬೆಳೆಯಲು ಹಾಗೂ ಸ್ಥಿರವಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇದೇ ಕಾರಣಕ್ಕೆ ಮುಂದಿನ 3 ತಿಂಗಳುಗಳವರೆಗೆ ಆಮದುಗಳನ್ನು ಹೆಚ್ಚಿಸಲು ನಾನು ಅನುಮತಿ ನೀಡುವುದಿಲ್ಲ. ಇದರಿಂದ ದೇಶ ಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ನಮಗೀಗ ಬೇರೆ ದಾರಿಯಿಲ್ಲ ಎಂದು ಇಸ್ಮಾಯಿಲ್ ಹೇಳಿದ್ದಾರೆ.

Leave a Reply

Your email address will not be published.