Praveen Murder.. ಹತ್ಯೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಹಂತಕರು..! ಹೇಗಿತ್ತು ಗೊತ್ತಾ ಕೊಲೆ ಸ್ಕೆಚ್..?

ಅಪರಾಧ ಜಿಲ್ಲೆ

ಹಿಂದೂ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ಆರೋಪಿಗಳು ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧನವಾಗಿದೆ. ಇನ್ನು ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಶಫೀಕ್, ರಿಯಾಜ್, ಸದ್ದಾಂ, ಬಶೀರ್, ಸೇರಿ 10 ಮಂದಿ ಅರೆಸ್ಟ್ ಆಗಿದ್ದು ಆರೋಪಿಗಳಿಗೆ ಸಹಾಯ ನೀಡಿದ್ದ ಒಟ್ಟು 9 ಮಂದಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಮೂವರು ಮಹಿಳೆಯರೂ ಇದ್ದು, ಹಂತಕರೆಂದು ತಿಳಿದಿದ್ದರೂ ಊಟ, ಆಶ್ರಯ, ಹಣ ನೀಡಿದ್ದರು ಎಂದು ತಿಳಿದು ಬಂದಿದೆ. ಹತ್ಯೆಗೆ ಬಳಸಿದ ಆಯುಧ, ಬೈಕ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಳ್ಯ ನಿವಾಸಿ ಶಿಯಾಬ್‌, ಎಲಿಮಲೆ ನಿವಾಸಿ ಬಶೀರ್ ಮತ್ತು ಅಂಕತಡ್ಕ ನಿವಾಸಿ ರಿಯಾಜ್‌ ಬಂಧಿತ ಆರೋಪಿಗಳು. 12 ಮಂದಿಯ ತಂಡ ಮೂವರ ಕೊಲೆಗೆ ಸ್ಕೆಚ್ ಹಾಕಿತ್ತಂತೆ ಎನ್ನಲಾಗಿದೆ. ಜುಲೈ 24, 25 ರಂದೇ ಪ್ರವೀಣ್ ಹತ್ಯೆಗೆ ತೆರಳಿತ್ತು. ಆದರೆ ಅಂದು ಪ್ರವೀಣ್ ಜೊತೆಗೆ ಆತನ ಪತ್ನಿ ಇದ್ದ ಕಾರಣ ಹಂತಕರ ಪ್ಲಾನ್ ಮಿಸ್ ಆಗಿತ್ತು. ಜುಲೈ 26ರಂದು ಬೈಕ್​ನಲ್ಲಿ ತ್ರಿಬಲ್ ರೈಡ್ ಬಂದ ಹಂತಕರು ಪ್ರವೀಣ್ ರನ್ನು ಹಿಂದಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಜಟ್ಕಾ-ಹಲಾಲ್‌ ವಿವಾದಕ್ಕೆ ಕೊಲೆ.?

ರಾಜ್ಯದಲ್ಲಿ ಹಲಾಲ್-ಜಟ್ಕಾ ವಿವಾದ ಬಳಿಕ ಪ್ರವೀಣ್ ನೆಟ್ಟಾರು ಅಕ್ಷಯ ಚಿಕನ್ ಎಂಬ ಕೋಳಿ ಅಂಗಡಿ ಆರಂಭಿಸಿದ್ದರು. ವ್ಯಾಪಾರವೂ ಚೆನ್ನಾಗಿಯೇ ಕುದುರಿತ್ತು. ಈ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಬೆಳ್ಳಾರೆ ಸಮೀಪದ ಕಳಂಜದಲ್ಲಿ ನಡೆದ ಮಸೂದ್ ಕೊಲೆಯಿಂದ ಕಿಚ್ಚು ಹೆಚ್ಚಾಗಿತ್ತು. ಇದೇ ಕಾರಣ ಎಂದು‌ ಹೇಳಲಾಗದಿದ್ದರೂ ಇದೆಲ್ಲದರ ಪ್ರತಿಕಾರವಾಗಿ ಪ್ರವೀಣ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರವೀಣ್ ಅಂತಿಮ ಯಾತ್ರೆ, ಹೇಗಿತ್ತು ಕೊಲೆ ಸ್ಕೆಚ್​..?

ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್ ಮೇಲೆ ಹಲ್ಲೆ ನಡೆಯುತ್ತದೆ. ಜುಲೈ 21ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಸೂದ್ ಸಾವು ಆಗುತ್ತದೆ. ಜುಲೈ 21ರಂದು ಬೆಳ್ಳಾರೆಯಲ್ಲೇ ಪ್ರತೀಕಾರದ ಹತ್ಯೆಗೆ ಹಂತಕರು ಸ್ಕೆಚ್ ಹಾಕಿದ್ದರು. ಬೆಳ್ಳಾರೆ ಆಸುಪಾಸಿನ ಸಂಘ ಪರಿವಾರದ ಪ್ರಮುಖನ ಹತ್ಯೆಗೆ ಸ್ಕೆಚ್ ಮಾಡಿದ್ದರು. ಹಂತಕರು ಹತ್ಯೆಗಾಗಿ ಒಂದು ವಾರ ತಯಾರಿ ಮಾಡಿದ್ದರು. ಜುಲೈ 26ರ ರಾತ್ರಿ 8.30ಕ್ಕೆ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮೂವರು ಪರಾರಿಯಾಗಿದ್ದರು.

ಹತ್ಯೆ ಬಳಿಕ ಮಸೀದಿಗೆ ತೆರಳಿದ್ದ ಹಂತಕರು.!

ಕೊಲೆ ಬಳಿಕ ಹಂತಕರು ಮಂಗಳೂರಿಗೆ ಹೋಗಿದ್ದು, ಅಲ್ಲಿಂದ ಕಾಸರಗೋಡಿನ ಮಾಲಿಕ್ ದಿನಾರ್ ಮಸೀದಿಗೆ ಹೋಗಿದ್ದರು. ಅಲ್ಲಿಂದ ಕೇರಳದ ಹಲವು ಕಡೆಗಳಿಗೆ ಹಂತಕರ ತಂಡ ಓಡಾಡಿತ್ತು. ತಮ್ಮ ಸುಳಿವು ಪೋಲೀಸರಿಗೆ ದೊರೆಯದಂತೆ ತಂಡ ನಿರಂತರವಾಗಿ ತಮ್ಮ ನೆಲೆಯನ್ನು ಬದಲಾಯಿಸುತ್ತಿತ್ತು.

ರಿಯಾಜ್ ಮತ್ತು ಶಫೀಕ್ ಪ್ರವೀಣ್ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು:

ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಾ ಇದ್ದರು. ಪ್ರವೀಣ್ ಜೊತೆ ಪತ್ನಿ ಇರೋದನ್ನು ನೋಡಿ ವಾಪಾಸ್ ಹೋಗ್ತಿದ್ದರು. ಜುಲೈ 26 ರಂದು ಪ್ರವೀಣ್ ಒಬ್ಬನೇ ಇದ್ದಾಗ ಇರಿದು ಕೊಲೆ ಮಾಡಿ, ಹಳೆಯ ಬೈಕ್ ಬಳಸಿ ಪರಾರಿಯಾಗಿದ್ದರು. ಬೈಕ್ ನಂಬರ್ ಅಸ್ಪಷ್ಟವಾಗಿ ಕಾಣಿಸುತ್ತಿತ್ತು.

ಬಂಧಿತ ಪ್ರಮುಖ ಆರೋಪಿಗಳು, ಕೇರಳದಲ್ಲಿ ಸಿಕ್ಕಿಬಿದ್ದ ಹಂತಕರು:

ಕೊಲೆ ಬಳಿಕ ಹಂತಕರು ಮೊದಲೇ ಕೇರಳದಲ್ಲಿ ಅಡಗುತಾಣವನ್ನು ಗುರುತು ಮಾಡಿಕೊಂಡಿದ್ದರು. ಕೇರಳದ ತಲಶೇರಿ, ಬಳಿಕ ಕಣ್ಣೂರು, ಮಲಪುರಂನಲ್ಲಿ ಅಡಗುತಾಣ ಮಾಡಿಕೊಂಡು,15 ದಿನದ ಅಂತರದಲ್ಲಿ 7 ಕಡೆ ಅಶ್ರಯ ಪಡೆದಿದ್ದರು. ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಹಂತಕರು ಜಾಗ ಬದಲಾಯಿಸುತ್ತಿದ್ದರು. ಆದರೆ ಮೊದಲೇ ಬಂಧಿತನಾಗಿದ್ದ ಶಫೀಕ್ ಮತ್ತು ಇನ್ನಿತರರ ಕಡೆಯಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದರು. ಆ.10ರಂದು ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಹಂತಕರು ಕೊನೆಗೂ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಬಂಧಿತ ಆರೋಪಿಗಳಿವರು:

1.ಸವಣೂರು ನಿವಾಸಿ ಝಾಕಿರ್ (29)

2.ಬೆಳ್ಳಾರೆ ನಿವಾಸಿ ಶಫೀಕ್ (27)

3.ಬೆಳ್ಳಾರೆ ಪಳ್ಳಿಮೊಗರು ನಿವಾಸಿ ಸದ್ದಾಂ (32)

4.ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್ (42)

5.ಸುಳ್ಯದ ನಾವೂರು ನಿವಾಸಿ ಹಬೀದ್ (22)

6.ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28)

7.ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33)

8.ಸುಳ್ಯ ನಿವಾಸಿ ಶಿಹಾಬುದ್ದೀನ್(33)

9.ಪುತ್ತೂರಿನ‌ ಅಂಕತ್ತಡ್ಕ ನಿವಾಸಿ ರಿಯಾಜ್(27)

10.ಸುಳ್ಯದ ಎಲಿಮಲೆ‌ ನಿವಾಸಿ ಬಶೀರ್(28).

ಕೊನೆಗೆ ಒಂದು ಕಡೆ ಪೋಲೀಸ್ ತಂಡ ಮೂವರನ್ನು ಹೆಡೆಮುರಿ ಕಟ್ಟಿ ಕರೆ ತಂದಿದೆ. ಬಂಟ್ವಾಳ ಸರ್ಕಲ್ ಇನ್ಸ್ ಸ್ಪೆಕ್ಟರ್ ಡಿ.ಟಿ.ನಾಗರಾಜ್, ಬಂಟ್ವಾಳ ಎಸ್.ಐ. ಪ್ರಸನ್ನ, ವಿಟ್ಲ ಠಾಣೆಯ ಹೆಚ್.ನಾಗರಾಜ್, ಸಂಪ್ಯ ಠಾಣೆಯ ಉದಯರವಿ, ಸುಳ್ಯ ಸರ್ಕಲ್ ನವೀನ್ ಜೋಗಿ, ಮಡಿಕೇರಿ ಸಿಸಿಬಿ ತಂಡ, ಸಿಐಡಿ ಅಧಿಕಾರಿ ಎಂ.ಎನ್.ಅನುಚೇತ್, ದಕ್ಷಿಣ ಕನ್ನಡ ಜಿಲ್ಲಾ ಅಡಿಷನ್ ಎಸ್​​ಪಿ ಕುಮಾರಚಂದ್ರ ತಂಡ ಕಳೆದ 16 ದಿನಗಳಿಂದ ಎಡಬಿಡದೆ ನಡೆಸಿದ ಕಾರ್ಯಾಚರಣೆಯಿಂದಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಬಂಧನವಾಗಿದೆ.

ಪ್ರವೀಣ್ ಸಾಕಿದ್ದ ನಾಯಿಮರಿ ಸಾವು:

ಪ್ರವೀಣ್ ನೆಟ್ಟಾರು ಅವರು ಪ್ರೀತಿಯಿಂದ ಸಾಕಿದ್ದ ಮುದ್ದು ನಾಯಿಮರಿ ಸಾವನ್ನಪ್ಪಿದೆ. ಒಡೆಯ ಪ್ರವೀಣ್ ನೆಟ್ಟಾರು ಅಗಲಿಕೆ ಬಳಿಕ ನಾಯಿ ಜಾನಿ ಆಹಾರ ತ್ಯಜಿಸಿತ್ತು. ಹೀಗಾಗಿ ಜಾನಿ ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ನಿರ್ಬಂಧ ತೆರವು:

ಕೊಲೆಗಳಿಂದ ಬೆಚ್ಚಿಬಿದ್ದಿದ್ದ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವ್ಯಾಪಾರ ವಹಿವಾಟು ಹಾಗೂ ಜನರ ಓಡಾಟಕ್ಕೆ ಸಂಬಂಧಿಸಿದ ಜಿಲ್ಲಾಡಳಿತ ಕೆಲವು ನಿರ್ಬಂಧ ಜಾರಿಗೊಳಿಸಿತ್ತು. ಆಗಸ್ಟ್ 7ರಂದು ಈ ನಿರ್ಬಂಧಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೆ ಜಿಲ್ಲೆಯಾದ್ಯಂತ ಸೆಕ್ಷನ್‌ 144 ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಆಗಸ್ಟ್​ 14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ. ಪ್ರವೀಣ್ ಹತ್ಯೆ ಸ್ಥಳದಲ್ಲಿ ಮಹಜರು: ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಇಂದು ಆರೋಪಿಗಳಾದ ಶಿಹಾಬ್, ರಿಯಾಜ್, ಬಶೀರ್ ರನ್ನು ಪೊಲೀಸರು ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಲಾಯಿತು.

ಮಹಜರು

ಪ್ರವೀಣ್ ವ್ಯಾಪಾರ ನಡೆಸುತ್ತಿದ್ದ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್‌ ಬಳಿಯೇ ಕೊಲೆ ನಡೆದಿತ್ತು. ಇದೀಗ ಕೊಲೆ ನಡೆಸಿದ ಕುರಿತು ಆರೋಪಿಗಳ ಸ್ಥಳ ಮಹಜರು ಡಿವೈಎಸ್ಪಿ ಗಾನ.ಪಿ ಕುಮಾರ್ ನೇತೃತ್ವದಲ್ಲಿ ನಡೆದಿದೆ. ಇದೆಯಾ ಪಿಎಫ್ಐ, ಎಸ್ಡಿಪಿಐ ಲಿಂಕ್: ಆರೋಪಿಗಳಿಗೆ ಪಿಎಫ್ಐ, ಎಸ್ಡಿಪಿಐ ಲಿಂಕ್ ಇರುವ ಬಗ್ಗೆ ಊಹಾಪೋಹಗಳು ಹರಿದಾಡಿದ್ದು, ಸದ್ಯ ಈ ಮಾಹಿತಿ ಬಗ್ಗೆ ತನಿಖೆ ಮುಂದುವರೆದಿದೆ. ಪ್ರಕರಣವನ್ನು ಎನ್ಐಎ ಗೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ತನಿಖಾ ದೃಷ್ಟಿಯಿಂದ ನೀಡಲಾಗದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published.