
ಪ್ರವೀಣ್ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 1 ಲಕ್ಷ ಪರಿಹಾರ ನೀಡುತ್ತೇನೆ: ಶಾಸಕ ಎಂ.ಪಿ ರೇಣುಕಾಚಾರ್ಯ
ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣವನ್ನು ಸಿಎಂ ಬೊಮ್ಮಾಯಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 1 ಲಕ್ಷ ಪರಿಹಾರ ನೀಡುತ್ತೇನೆ. ಬಗ್ಗು ಬಡಿದರೆ ಮಾತ್ರ ಇದು ನಿಲ್ಲುತ್ತದೆ. ಎಲ್ಲೋ ಒಂದು ಕಡೆ ನಮಗೂ ನೋವಾಗುತ್ತೆ. ಹರ್ಷ ಆಯ್ತು, ಚಂದ್ರು ಆಯ್ತು. ಈಗ ಪ್ರವೀಣ್.. ನಮ್ಮ ಕಾರ್ಯಕರ್ತ ಮುಖಂಡರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಸಂಘಟನೆ ಪ್ರಮುಖರಿಗೂ ನೋವಿದೆ ಎಂದರು.
ಯೋಗಿ ಆದಿತ್ಯನಾಥ್ ಮಾದರಿಯಲ್ಲೇ ಹದ್ದುಬಸ್ತಿನಲ್ಲಿ ಇಡಬೇಕು. ಸಾಫ್ಟ್ ಕಾರ್ನರ್ ತೋರಿಸಿದರೆ ಆಗೋದಿಲ್ಲ. ಸಿಎಂ ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ 25-30 ಹಿಂದೂ ಯುವಕರ ಹತ್ಯೆ ಆಯ್ತು. ನಮ್ಮ ಸರ್ಕಾರ ಬಂದಾಗ ಕಂಟ್ರೋಲ್ ಆಗಿದೆ ಎಂದು ತಿಳಿಸಿದರು. ಯುಪಿ ಮಾದರಿಯಲ್ಲೇ ಕ್ರಮ ಮಾಡಿದರೆ ಮಾತ್ರ ಸಾಧ್ಯ. ಸಿಎಂ ಭೇಟಿ ಮಾಡಿ ಒತ್ತಡ ಹಾಕ್ತೀನಿ, ಕಠಿಣ ಕ್ರಮ ಜರುಗಿಸಬೇಕು. ನನಗೇ ಎರಡು ಬಾರಿ ಬೆದರಿಕೆ ಕರೆ ಬಂದರೂ ಅವರನ್ನು ಪತ್ತೆ ಹಚ್ಚೋದಕ್ಕಾಗಿಲ್ಲ. ನನ್ನಂಥವನ ಪರಿಸ್ಥಿತಿ ಇದಾದರೆ ಸಾಮಾನ್ಯ ಜನರ ಸ್ಥಿತಿ ಏನು..? ಸರ್ಕಾರದ ವೈಫಲ್ಯ ಅಂತ ಹೇಳಲ್ಲ. ಆದರೆ ನನಗೇ ಈ ಬಗ್ಗೆ ಮಾತನಾಡಿದರೆ ಮಾಧ್ಯಮದ ಮುಂದೆ ಮುಜುಗರ ಆಗುತ್ತೆ ಎಂದು ಹೇಳಿದರು.