ಪ್ರಧಾನಿ ಮೋದಿಯವರ ತಾಯಿಯ ತೂಕದಷ್ಟು ಕಾಶಿ ವಿಶ್ವನಾಥ ದೇಗುಲಕ್ಕೆ ಚಿನ್ನದಿಂದ ಅಲಂಕಾರ..!

ರಾಷ್ಟ್ರೀಯ

ವಾರಾಣಸಿ : ಇತ್ತೀಚೆಗೆ ನವೀಕರಣಗೊಂಡಿರುವ ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ವ್ಯಕ್ತಿಯೊಬ್ಬರು 60 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದು, ಈ ಪೈಕಿ 37 ಕೆ.ಜಿ. ಚಿನ್ನವನ್ನು ಗರ್ಭಗಡಿಯ ಒಳಗೋಡೆಗಳಿಗೆ ಲೇಪನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. 37 ಕೆ.ಜಿಯನ್ನೇ ಬಳಸಿದ್ದರ ಹಿಂದೆ ವಿಶೇಷ ಉದ್ದೇಶವಿದೆ. ಇದು ಇತ್ತೀಚೆಗೆ 100 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ರ ಈಗಿನ ತೂಕ. ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಮತಕ್ಷೇತ್ರದಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದಾಗ ಒಳಗೋಡೆಗಳಿಗೆ ಚಿನ್ನದ ಲೇಪನ ಮಾಡಿದ ಚಿತ್ರಗಳನ್ನು ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ.

ವಿಭಾಗೀಯ ಆಯುಕ್ತ ದೀಪಕ್‌ ಅರ್ಗವಾಲ್‌ ‘ದೇವಾಲಯಕ್ಕೆ ದಕ್ಷಿಣ ಭಾರತದ ಅನಾಮಧೇಯ ವ್ಯಕ್ತಿಯಿಂದ 60 ಕೆ.ಜಿ. ಚಿನ್ನ ದೇಣಿಗೆ ಯಾಗಿ ಬಂದಿತ್ತು. ಅದರಲ್ಲಿ 37 ಕೆಜಿ ಚಿನ್ನವನ್ನು ಗರ್ಭಗುಡಿ ಒಳಗೋಡೆಗೆ ಲೇಪನ ಮಾಡಲು ಬಳಸಲಾಗಿದೆ. ಉಳಿದ 23 ಕೆ.ಜಿ. ಚಿನ್ನವನ್ನು ಕಾಶಿ ವಿಶ್ವನಾಥ ದೇವಾಲಯದ ಗುಮ್ಮಟದ ಕೆಳಭಾಗವನ್ನು ಅಲಂಕರಿಸಲು ಬಳಸಲಾಗುವುದು’ ಎಂದಿದ್ದಾರೆ. 18ನೇ ಶತಮಾನದ ಬಳಿಕ ಮೊದಲ ಬಾರಿಗೆ ದೇವಾಲಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನದ ಲೇಪನ ಮಾಡಲಾಗಿದೆ. 1777ರಲ್ಲಿ ಇಂದೋರಿನ ಮಹಾರಾಣಿ ಅಹಲ್ಯಾ ಬಾಯಿ ಹೋಳ್ಕರ್‌ ಹಾಗೂ ಪಂಜಾಬಿನ ಮಹಾರಾಜ ರಣಜೀತ್‌ ಸಿಂಗ್‌ ಇದೇ ದೇವಾಲಯದ ಗುಮ್ಮಟ ನಿರ್ಮಾಣಕ್ಕೆ 1 ಟನ್‌ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು.

Leave a Reply

Your email address will not be published.