ಜನಪರ ಆಡಳಿತವನ್ನು ನೀಡುವುದೇ ನಿಜವಾದ ಪ್ರಜಾಪ್ರಭುತ್ವ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು

ಬೆಂಗಳೂರು: ಜನಪರ ಆಡಳಿತವನ್ನು ನೀಡುವುದೇ ನಿಜವಾದ ಪ್ರಜಾಪ್ರಭುತ್ವ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ, ‘ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಸಮನ್ವಯತೆ’ ಗಾಗಿ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಜಧರ್ಮ, ರಾಮರಾಜ್ಯ ಹಾಗೂ ಕಲ್ಯಾಣ ರಾಷ್ಟ್ರ ಎಂಬ ಪರಿಕಲ್ಪನೆಗಳ ಬಗ್ಗೆ ಭಾರತೀಯರಿಗೆ ತಿಳಿವಳಿಕೆ ಇದೆ. ಚಾಣಕ್ಯ ನೀತಿ, ಶುಕ್ರ ನೀತಿ ಸಾರ, ರಾಮಾಯಣ, ಮಹಾಭಾರತವನ್ನು ಭಾರತೀಯರು ಓದಿಕೊಂಡು ಬಂದಿದ್ದಾರೆ. ಬೌದ್ಧ ಧರ್ಮೀಯರ ಕೃತಿಗಳಲ್ಲಿ ಕೂಡ ಉತ್ತಮ ಆಡಳಿತವೆಂದರೆ ಏನು ಮತ್ತು ಹೇಗೆ ನಡೆಸಬೇಕು ಎನ್ನುವುದನ್ನು ತಿಳಿಸಲಾಗಿದೆ.

ಹೀಗಾಗಿ ಉತ್ತಮ ಆಡಳಿತದ ಬಗ್ಗೆ ಹಿಂದಿನಿಂದಲೂ ಭಾರತೀಯರಿಗೆ ಅನುಭವ ಇದೆ ಎಂದರು. ರಾಜಧರ್ಮವು, ರಾಜನ ಆಡಳಿತದ ಉದ್ದೇಶ ಮತ್ತು ಅವರ ಮಂತ್ರಿಗಳ ಆಡಳಿತ ನೀತಿಯ ಬಗ್ಗೆ ತಿಳಿಸಿಕೊಡುತ್ತಿತ್ತು. ಕರ್ನಾಟಕವೂ ಆಡಳಿತ ನೀತಿಗೆ ಸಾಕಷ್ಟು ಕೊಡುಗೆ ಕೊಟ್ಟಿದೆ. 12ನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರಾಗಿ ಅನುಭವ ಮಂಟಪದ ಮೂಲಕ ನಿಜವಾದ ಪ್ರಜಾಪ್ರಭುತ್ವದ ಮಾದರಿಗೆ ಬುನಾದಿ ಹಾಕಿ ಕೊಟ್ಟಿದ್ದರು. ಪ್ರಜಾಪ್ರಭುತ್ವದ ಬಗ್ಗೆ ಭಾರತ ಬೇರೆಲ್ಲೂ ನೋಡಬೇಕಿಲ್ಲ. ಭಾರತದ ಕಡೆ ಎಲ್ಲರೂ ನೋಡುವಂತಹ ಇತಿಹಾಸವಿದೆ ಎಂದು ಸಚಿವರು ಹೇಳಿದ್ದಾರೆ.

Leave a Reply

Your email address will not be published.