ರಾಜ್ಯಾದ್ಯಂತ ಭಾರಿ ಮಳೆ ಹಿನ್ನೆಲೆ: ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚಿಸಿ ಸರ್ಕಾರ ಆದೇಶ

ಬೆಂಗಳೂರು

ಬೆಂಗಳೂರು: ರಾಜ್ಯದ ಹಲವೆಡೆ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆ ಶಾಲೆಗಳಲ್ಲಿನ ಮುನ್ನೆಚ್ಚರಿಕಾ ಕ್ರಮಗಳ ಕುರಿತು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಮೇ 16 ರಿಂದ 2022-23ನೇ ಶೈಕ್ಷಣಿಕ ವರ್ಷದ ಶಾಲೆಗಳು ಪ್ರಾರಂಭವಾಗಿದೆ. ಆದರೆ, ರಾಜ್ಯದ ಬಹುತೇಕ ಕಡೆಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ತೀವ್ರವಾಗಿ ಮಳೆ ಆಗುತ್ತಿದೆ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶೈಕ್ಷಣಿಕ ಉಸ್ತುವಾರಿ ಅಧಿಕಾರಿ, ಸಿಬ್ಬಂದಿಗಳಿಗೆ ವಿಶೇಷ ಸುತ್ತೋಲೆ ಹೊರಡಿಸುವ ಮೂಲಕ ಸೂಚಿಸಿದೆ.

ತೀವ್ರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಕೆಲವು ಶಾಲಾ ಕಟ್ಟಡಗಳು ಯಾವುದೇ ಸಂದರ್ಭದಲ್ಲಿ ಹಾನಿಗೊಳಗಾಗುವ, ಬಿದ್ದು ಹೋಗುವ ಸಂಭವವಿರುತ್ತದೆ. ಪ್ರಯುಕ್ತ, ಅಂತಹ ಶಾಲಾ ಕಟ್ಟಡಗಳನ್ನು, ತರಗತಿಯ ಕೊಠಡಿ, ಶೌಚಾಲಯಗಳನ್ನು ಬಳಸದೇ ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡ, ಕೊಠಡಿಗಳನ್ನು ಬಳಕೆ ಮಾಡಿಕೊಳ್ಳುವುದು. ಮಕ್ಕಳು ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಕೊಠಡಿಗಳ ಮತ್ತು ಶೌಚಾಲಯಗಳ ಸಮೀಪದಲ್ಲಿ ಸುತ್ತಾಡದಂತೆ ಎಚ್ಚರಿಕೆ ಕ್ರಮ ವಹಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

 

Leave a Reply

Your email address will not be published.