
ಹರ್ಷನ ಕೊಲೆಗೆ ಗೃಹಸಚಿವ ಜ್ಞಾನೇಂದ್ರ ಮತ್ತು ಈಶ್ವರಪ್ಪ ಇದಕ್ಕೆ ಹೊಣೆ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಹರ್ಷನ ಕೊಲೆ ಶಿವಮೊಗ್ಗನಲ್ಲಿ ನಡೆದಿರುವುದರಿಂದ ಜ್ಞಾನೇಂದ್ರ ಮತ್ತು ಈಶ್ವರಪ್ಪ ಇದಕ್ಕೆ ಹೊಣೆಗಾರರಾಗುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಶಿವಮೊಗ್ಗನಲ್ಲಿ ಕಳೆದ ಮೂರು ದಿನಗಳಲ್ಲಿ ಮೂರು ಕೊಲೆಗಳಾಗಿವೆ. ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಯಾಗಿದ್ದು ಭಾನುವಾರ ರಾತ್ರಿ. ಅಪರಾಧ ನಡೆದ ಅರ್ಧ ಗಂಟೆಯೊಳಗೆ ಶಿವಮೊಗ್ಗನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಆದರೆ ಮರುದಿನ ಹರ್ಷನ ಮೃತದೇಹದ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡುತ್ತಾರೆ. ಪೊಲೀಸರಿಗೆ ಯಾರು ಸೂಚನೆ ನೀಡಿದ್ದು? ಈ ಮೆರವಣಿಗೆಯಲ್ಲಿ ಈಶ್ವರಪ್ಪ ಮತ್ತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಳ್ಳುತ್ತಾರೆ. ಇದರ ಅರ್ಥವೇನು ಎಂದು ರಾಜ್ಯಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹರ್ಷನ ಕೊಲೆಯನ್ನು ನಾನು ಖಂಡಿಸಿದ್ದೇನೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ನಾನು ಹೇಳಿದ್ದೇನೆ. ಗೃಹ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ತವರು ಜಿಲ್ಲೆಯಲ್ಲಿ ಇಂಥ ಸ್ಥಿತಿ ತಲೆದೋರಿರುವುದು ಶೋಚನೀಯ ಎಂದು ಸಿದ್ದರಾಮಯ್ಯ ಹೇಳಿದರು.