
Russia Ukraine War.. ಉಕ್ರೇನ್-ರಷ್ಯಾ ಯುದ್ಧಕ್ಕೆ ಕದನ ವಿರಾಮ ಘೋಷಣೆ..! ಉಕ್ರೇನ್ ತೊರೆಯಲು ಸೂಚನೆ..!
ರಷ್ಯಾ: ಉಕ್ರೇನ್ ಮತ್ತು ರಷ್ಯಾ ಯುದ್ಧ 10 ದಿನಕ್ಕೆ ಕಾಲಿಟ್ಟಿದ್ದು, ಅಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರ ಮಾಡುವ ಸಲುವಾಗಿ ರಷ್ಯಾ ಕದನ ವಿರಾಮ ಘೋಷಿಸಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ.ಯುದ್ಧದ 10ನೇ ದಿನವಾದ ಇಂದು ಬೆಳಗ್ಗೆ 10ರಿಂದ (ರಷ್ಯಾದ ಸಮಯ) ಕದನ ವಿರಾಮಕ್ಕೆ ರಷ್ಯಾ ಕರೆ ನೀಡಿದೆ. ಮಾರಿಯುಪೋಲ್ ಮತ್ತು ವೊಲ್ನೋವಾಖಾದಿಂದ ನಾಗರಿಕರನ್ನು ಸ್ಥಳಾಂತರ ಮಾಡಲು ಕದನ ವಿರಾಮ ಘೋಷಣೆ ಮಾಡಲಾಗಿದೆ.
ಒಟ್ಟು ಐದೂವರೆ ಗಂಟೆ ಕದನ ವಿರಾಮ ಜಾರಿಯಲ್ಲಿರಲಿದೆ. ಕದನ ವಿರಾಮ ಮುಗಿದ ಬಳಿಕ ರಷ್ಯಾ ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಬೆಲಾರಸ್ನ ಬ್ರೆಸ್ಟ್ನಲ್ಲಿ ನಡೆದ ಎರಡನೇ ಸುತ್ತಿನ ಮಾತುಕತೆಯಲ್ಲಿ ನಾಗರಿಕರ ಸ್ಥಳಾಂತರದ ಕುರಿತಂತೆ ಚರ್ಚೆ ನಡೆಸಲಾಗಿತ್ತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಈ ವೇಳೆ ರಷ್ಯಾ ತಕ್ಷಣದ ಕದನ ವಿರಾಮವನ್ನು ಘೋಷಿಸಬೇಕು ಎಂದು ಉಕ್ರೇನ್ ಸರ್ಕಾರ ಒತ್ತಾಯ ಮಾಡಿತ್ತು.
ಉಕ್ರೇನ್ ಅಧಿಕಾರಿ ಮಿಖಾಯಿಲ್ ಪೊಡೊಲ್ಯಾಕ್ ಅವರ ಪ್ರಕಾರ ಸುಮಾರು 2,00,000 ಜನರು ಮಾರಿಯುಪೋಲ್ ಅನ್ನು ತೊರೆಯಲು ಮತ್ತು 20 ಸಾವಿರ ಮಂದಿ ಡೊನೆಟ್ಸ್ಕ್ ಪ್ರದೇಶದಲ್ಲಿನ ವೊಲ್ನೋವಾಖಾವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.