
ಜೊಕೊವಿಕ್ ಹಿಂದಿಕ್ಕಿ ಟೆನಿಸ್ ನಲ್ಲಿ ನಂ.1 ಪಟ್ಟಕ್ಕೇರಿದ ರಷ್ಯಾದ ಡೇನಿಯಲ್ ಮೆಡ್ವೆಡೆವ್..!
ದುಬೈ: 20 ಗ್ರ್ಯಾನ್ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್ ಜೋಕೋವಿಚ್ರನ್ನು ಹಿಂದಿಕ್ಕಿದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಎಟಿಪಿ ಟೆನಿಸ್ನಲ್ಲಿ ವಿಶ್ವ ನಂ.1 ಸ್ಥಾನ ಅಲಂಕರಿಸಿದ್ದಾರೆ. ದುಬೈ ಟೆನಿಸ್ ಚಾಂಪಿಯನ್ಶಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಜೋಕೋವಿಚ್, ಚೆಕ್ ಗಣರಾಜ್ಯದ ಜಿರಿ ವೆಸೆಲಿ ವಿರುದ್ಧ ಸೋಲುವುದರೊಂದಿಗೆ ನಂ.1 ಸ್ಥಾನ ಕಳೆದುಕೊಂಡರು. 2ನೇ ಸ್ಥಾನದಲ್ಲಿದ್ದ ಮೆಡ್ವೆಡೆವ್ ಅಗ್ರಸ್ಥಾನಕ್ಕೇರಿ, ಈ ಸಾಧನೆ ಮಾಡಿದ 27ನೇ ಆಟಗಾರ ಎನಿಸಿಕೊಂಡರು. 2020ರ ಫೆಬ್ರವರಿ 3ರಂದು ನಂ.1 ಸ್ಥಾನಕ್ಕೇ ರಿದ ನೊವಾಕ್ ಜೋಕೋವಿಚ್, ಒಟ್ಟಾರೆ 361 ವಾರಗಳ ಅಗ್ರಸ್ಥಾನದಲ್ಲಿದ್ದು ದಾಖಲೆ ಬರೆದಿದ್ದಾರೆ. 2004ರಿಂದ ರೋಜರ್ ಫೆಡರರ್, ರಾಫೆಲ್ ನಡಾಲ್, ಆ್ಯಂಡಿ ಮರ್ರೆ, ಜೋಕೋವಿಚ್ ನಂ.1 ಸ್ಥಾನ ಪಡೆಯುತ್ತಿದ್ದು, ಬರೋಬ್ಬರಿ 18 ವರ್ಷಗಳ ಬಳಿಕ ಈ ನಾಲ್ವರನ್ನು ಹೊರತುಪಡಿಸಿ ಬೇರೊಬ್ಬ ಆಟಗಾರ ಅಗ್ರಸ್ಥಾನಕ್ಕೇರಿದ್ದಾರೆ.