ವೆಸ್ಟ್​ಇಂಡೀಸ್ ವಿರುದ್ಧ ಎರಡನೇ ಟಿ20 ಪಂದ್ಯ; ಸ್ಟಾರ್​ ಬೌಲರ್​ ಪಂದ್ಯದಿಂದ ಔಟ್​

ಕ್ರೀಡೆ

ಕೋಲ್ಕತ್ತಾ: ಏಕದಿನ ಸರಣಿಯಿಂತೆ ಟಿ20 ಸರಣಿಯನ್ನೂ ಕ್ಲೀನ್​ಸ್ವೀಪ್ ಮಾಡುವ ಯೋಜನೆಯಲ್ಲಿರುವ ಭಾರತ ಇಂದು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿಂದು ದ್ವಿತೀಯ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಸರಣಿ ವಶಪಡಿಸಿ ಕೊಳ್ಳುವ ಉತ್ಸಾಹದಲ್ಲಿದೆ. ಅಹ್ಮದಾಬಾದ್‌ನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ್ದ ಭಾರತ ತಂಡ, 3 ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿದೆ. ಇತ್ತ ಕೀರೊನ್ ಪೊಲಾರ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಚೊಚ್ಚಲ ಗೆಲುವನ್ನು ಎದುರು ನೋಡುತ್ತಿದೆ. ತವರು ನೆಲದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಟಿ20 ಸರಣಿಯಲ್ಲಿ ಮಣಿಸಿ ಭಾರತಕ್ಕೆ ಆಗಮಿಸಿದ್ದ ಕೆರಿಬಿಯನ್ನರ ಪ್ರದರ್ಶನ ಇಲ್ಲಿ ಮಂಕಾಗಿದ್ದು, ಇಂದಿನ ಪಂದ್ಯ ಮಹತ್ವದ್ದಾಗಿದೆ. ಇದರ ನಡುವೆ ರೋಹಿತ್ ಶರ್ಮಾ ಪಡೆಗೆ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬೌಲರ್ ಇಂಜುರಿಗೆ ತುತ್ತಾಗಿದ್ದು, ಇಂದಿನ ಎರಡನೇ ಟಿ20 ಯಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ.

ಟೀಮ್ ಇಂಡಿಯಾದ ಸ್ಟಾರ್ ವೇಗಿ ದೀಪಕ್ ಚಹರ್ ಮೊದಲ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬಲಗೈಗೆ ಗಾಯಮಾಡಿಕೊಂಡಿದ್ದಾರೆ. ಹೀಗಾಗಿ ಇವರು ಇಂದಿನ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ. ಗುಣಮುಖರಾದರೂ ವಿಶ್ರಾಂತಿ ಬೇಕಾಗಿರುವ ಕಾರಣ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಅವಕಾಶಕ್ಕಾಗಿ ಕಾಯುತ್ತಿರುವ ಐಪಿಎಲ್​ನ ಸ್ಟಾರ್ ವೇಗಿ ಆವೇಶ್ ಖಾನ್​ ಸ್ಥಾನ ಪಡೆಯಬಹುದು. ಹೀಗಾದಲ್ಲಿ ಮತ್ತೊಬ್ಬ ಆಟಗಾರ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ. ಮೊದಲ ಪಂದ್ಯದಲ್ಲಿ ರವಿ ಬಿಷ್ಟೋಯ್ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ್ದರು.

Leave a Reply

Your email address will not be published.